×
Ad

ಸಮಸ್ತ ವಿದ್ಯಾಭ್ಯಾಸ ಬೋರ್ಡ್ ನ ನೂತನ ಅಧ್ಯಕ್ಷರಾಗಿ ಶೈಖುನಾ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಆಯ್ಕೆ

Update: 2021-11-14 10:28 IST

ಮಂಗಳೂರು, ನ.14: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಬ್ಯಾಸ ಬೋರ್ಡ್ ನ ನೂತನ ಅಧ್ಯಕ್ಷರಾಗಿ ಶೈಖುನಾ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಬಾಖವಿ ಆಯ್ಕೆಯಾಗಿದ್ದಾರೆ. 

ಈ ಹಿಂದೆ ಅಧ್ಯಕ್ಷರಾಗಿದ್ದ ಶೈಖುನಾ ಪಿ.ಕೆ.ಪಿ.ಅಬ್ದುಸ್ಸಲಾಂ ಉಸ್ತಾದ್ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಕೇರಳದ ಕಲ್ಲಿಕೋಟೆಯ ಸಮಸ್ತ ಕೇಂದ್ರ ಕಚೇರಿಯಲ್ಲಿ ನಡೆದ ವಿದ್ಯಾಭ್ಯಾಸ ಬೋರ್ಡ್ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

1949ರಲ್ಲಿ ಮಲಪ್ಪುರಂ ಜಿಲ್ಲೆಯ ಕೊಳಕಾಡ್ ಕುಂಞಿ ಮುಹಮ್ಮದ್ ಮುಸ್ಲಿಯಾರ್ ಹಾಗೂ ಖದೀಜಾ ದಂಪತಿಯ ಪುತ್ರನಾಗಿ ಜನಿಸಿದ ಪಿ.ಕೆ.ಮೂಸ ಕುಟ್ಟಿ ಹಝ್ರತ್, ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಉನ್ನತ ವ್ಯಾಸಂಗಕ್ಕಾಗಿ ವೆಲ್ಲೂರ್ ಬಾಖಿಯಾತ್ ಸ್ವಾಲಿಹಾತ್ ನಲ್ಲಿ 1969ರಲ್ಲಿ ಸೇರ್ಪಡೆಗೊಂಡು,1971ರಲ್ಲಿ ಬಾಖವಿ ಪದವಿ ಗಳಿಸಿದರು.

ವೆಲ್ಲೂರು ಲತೀಫಿಯ್ಯ, ಬಾಖಿಯಾತುಸ್ಸಾಲಿಹಾತ್, ತಿರುವನಂತಪುರಂ ಮನ್ನಾನಿಯ್ಯಾ ಕಾಲೇಜು ಮೊದಲಾದೆಡೆ ನಲ್ವತ್ತು ವರ್ಷಗಳ ಕಾಲ ಗುರುವರ್ಯರಾಗಿದ್ದ ಅವರು ಪ್ರಸಕ್ತ ಪ್ರತಿಷ್ಠಿತ ನಂದಿ ದಾರುಸ್ಸಲಾಂ ಅರಬಿಕ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆಗೈಯ್ಯುತ್ತಿದ್ದಾರೆ.

ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆಗಿರುವ ಪಿ.ಕೆ.ಮೂಸ ಕುಟ್ಟಿ ಹಝ್ರತ್ ಅರೇಬಿಕ್, ಇಂಗ್ಲಿಷ್, ಉರ್ದು, ಮಲಯಾಳ ಸಹಿತ  ಬಹು ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದು, ಹಲವು ಗ್ರಂಥಗಳನ್ನೂ ರಚಿಸಿದ್ದಾರೆ.

2009ರಿಂದ ದಾರಿಮಿ ಬಿರುದು ಪಡೆದ ಸಹಸ್ರಾರು ಕರ್ನಾಟಕದ ದಾರಿಮಿಗಳು ಇವರ ಶಿಷ್ಯಂದಿರಾಗಿದ್ದು, ಆ ಮೂಲಕ ಕರ್ನಾಟಕ ರಾಜ್ಯ ದೊಂದಿಗೆ ಇವರು ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಪಿ.ಕೆ.ಮೂಸ ಕುಟ್ಟಿ ಹಝ್ರತ್ ಅವರನ್ನು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆ ಮಾಡಿದ್ದನ್ನು ಸಮಸ್ತ ದಕ್ಷಿಣ ಕನ್ನಡ ಜಿಲ್ಲಾ ಮುಫತ್ತಿಶ್ ಗಳ ಒಕ್ಕೂಟದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಹಾಗೂ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಎಸ್.ಬಿ.ಮುಹಮ್ಮದ್ ದಾರಿಮಿ  ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News