×
Ad

ಯಕ್ಷಗಾನ ಶಾಸ್ತ್ರೀಯ, ಜಾನಪದೀಯ ಕಲೆಗಳ ಮಿಶ್ರಣ: ಸೋದೆ ಶ್ರೀ

Update: 2021-11-14 20:05 IST

ಉಡುಪಿ, ನ.14: ಭಾರತೀಯ ಕಲಾಪರಂಪರೆ ವಿಶಿಷ್ಟ, ಶ್ರೀಮಂತವಾದುದು. ಶಾಸ್ತ್ರೀಯ, ಜಾನಪದೀಯ ಕಲೆಗಳೂ ಇವೆ. ಯಕ್ಷಗಾನ ಈ ಎರಡೂ ಕಲೆಗಳ ಮಿಶ್ರಣವಾಗಿದೆ ಎಂದು ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭರು ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ರವಿವಾರ ನಡೆದ ಹಿರಿಯ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರ ಕೋಳ್ಯೂರು ವೈಭವ ಪೂರ್ಣ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಟಿವಿ ಸಹಿತ ಸಾಮಾಜಿಕ ಮಾಧ್ಯಮಗಳ ಉಗಮಕ್ಕೆ ಮುನ್ನ ಯಕ್ಷಗಾನ ಮನೋರಂಜನೆ ಮಾಧ್ಯಮವಾಗಿತ್ತು. ಹಲವಾರು ಮಂದಿ ಇದರಿಂದ ಜ್ಞಾನ ಸಂಪಾದನೆ ಮಾಡಿದ್ದರು. ಯಕ್ಷಗಾನವನ್ನು ಮಹಾಕಾವ್ಯಗಳಿಗೆ ಹೋಲಿಸ ಬಹುದು. ಯಕ್ಷಗಾನದಲ್ಲಿಯೂ ನವರಸಗಳಿಗೆ ಪ್ರಾಧಾನ್ಯತೆ ಇದೆ. ಯಕ್ಷಗಾನ ಕಲೆ ಮೇಳೈಸಲು ಕಲಾವಿದರ ಪ್ರೌಢಿಮೆಯೂ ಅಷ್ಟೇ ಪ್ರಾಮುಖ್ಯತೆ ವಹಿಸುತ್ತದೆ ಎಂದು ಅವರು ತಿಳಿಸಿದರು.

ಮಂಗಳೂರು ವಿವಿ ಪರೀಕ್ಷಾಂಗ ಉಪಕುಲಸಚಿವ ಡಾ.ಪಿ.ಎಲ್.ಧರ್ಮ ಮಾತನಾಡಿ, ಮಂಗಳೂರು ವಿವಿ ಕೋಳ್ಯೂರು ಅವರ ಬಗ್ಗೆ ಸಮಗ್ರ ಅಧ್ಯಯನ ಮಾಡಲು ತಯಾರಿದೆ. ಕಲಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಯಕ್ಷಗಾನಕ್ಕೆ ಸಂಬಂಧಿಸಿ ಎಲ್ಲ ಸಣ್ಣ ವಯಸ್ಸಿನ ಯುವಕ, ಯುವತಿಯರನ್ನು ಕಲೆ, ಸಂಸ್ಕಾರವಂತರಾಗಿ ರೂಪುಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಕೊಳ್ಯೂರು ರಾಮಚಂದ್ರ ರಾವ್, ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್, ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್ ಉಪಸ್ಥಿತರಿದ್ದರು. ವಿ.ಜಿ.ಶೆಟ್ಟಿ ಸ್ವಾಗತಿಸಿದರು. ನಟರಾಜ್ ಉಪಾಧ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News