ಮಕ್ಕಳ ಹಕ್ಕುಗಳ ರಕ್ಷಣೆಯಾಗಬೇಕು : ಮೌಲಾನ ಝುಬೈರ್
ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯಲ್ಲಿ ಮಕ್ಕಳ ಸಂತೆ ಆಯೋಜಿಸುವುದರ ಮೂಲಕ ಮಕ್ಕಳ ದಿನವನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೂ ಆಗಿರುವ ಮೌಲಾನ ಎಸ್.ಎಂ.ಸೈಯದ್ಯ ಝುಬೈರ್, ಕೋವಿಡ್ ನಿಂದಾಗಿ ಮಕ್ಕಳ ಮನಸ್ಥಿತಿ ಬದಲಾಗಿದೆ. ಮಕ್ಕಳ ಹಕ್ಕುಗಳ ಕುರಿತಂತೆ ಮಾತನಾಡುವ ನಾವು ಅವರ ಹಕ್ಕುಗಳನ್ನು ರಕ್ಷಿಸುವಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರಗಳೂ ವಿಫಲವಾಗುತ್ತಿರುವುದು ವಿಪರ್ಯಾಸ, ಮಕ್ಕಳಿಗೆ ಉತ್ತಮ ಶಿಕ್ಷಣ, ಶುದ್ದಕುಡಿಯುವ ನೀರು, ಅವರಿಗೆ ಪೌಷ್ಠಿಕ ಆಹಾರ ದೊರೆಯುವಂತಾಗಬೇಕು. ಎಷ್ಟೋ ಮಕ್ಕಳು ಇಂದು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದರು.
ಉದ್ಯಮಿ ಅನಿವಾಸಿ ಭಾರತೀಯ ಖಮರ್ ಸಾದಾ ಮಾತನಾಡಿ, ಮಕ್ಕಳ ದಿನಾಚರಣೆಯೆಂದು ಶಮ್ಸ್ ಸ್ಕೂಲ್ ಆಡಳಿತ ಮಂಡಳಿ ಅರ್ಥ ಪೂರ್ಣವಾದ ಕಾರ್ಯಕ್ರಮ ಆಯೋಜಿಸಿದೆ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಆಯೋಜನೆಗಳು ಸಹಕಾರಿಯಾಗಲಿವೆ. ಭಟ್ಕಳದ ಸಮುದಾಯ ವ್ಯಾಪಾರ ಮತ್ತು ವ್ಯವಹಾರದಲ್ಲಿ ಪರಿಣಿತರಾಗಿದ್ದಾರೆ ಮಕ್ಕಳಲಲ್ಲಿ ಈಗಿಂದಲೇ ವ್ಯವಹಾರ ಜ್ಞಾನ ಬೆಳೆಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಸಂಸ್ಥೆಯ ಪ್ರಾಂಶುಪಾಲ ಲಿಯಾಖತ್ ಅಲಿ ಮಾತನಾಡಿ, ಇಂದು ನಾವು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಅವರಲ್ಲಿನ ಕೌಶಲ್ಯಗಳನ್ನು ಹೊರತರುವಲ್ಲಿ ಇದೊಂದು ವೇದಿಕೆಯನ್ನು ಒದಗಿಸಿದ್ದೇವೆ. ಪಾಲಕರು, ಶಿಕ್ಷಕರ ಸಹಕಾರದೊಂದಿಗೆ ನಾವು ಸಮಾಜವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಲು ಸಾಧ್ಯ. ವಿದ್ಯಾರ್ಥಿಗಳ ಅಭಿವೃದ್ಧಿಗೆ ಶಿಕ್ಷಕರು,ಪಾಲಕರು ಹಾಗೂ ಶಿಕ್ಷಣ ಸಂಸ್ಥೆ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ಮೋಂಟೆಸ್ಸರಿ ಮಕ್ಕಳಿಂದ ನಡೆದ ಫ್ಯಾನ್ಸಿ ಡ್ರೆಸ್ ಪ್ರದರ್ಶನ, ವಿದ್ಯಾರ್ಥಿಗಳಿಂದ ಸಿದ್ದಪಡಿಸಿದ್ದ ವಿವಿಧ ರೀತಿಯ ತಿಂಡಿತಿನಿಸುಗಳು ಪಾಲಕರಿಗೆ ಆಕರ್ಷಿಸಿದರು. ಮಕ್ಕಳು ಬಹಳ ಆಸಕ್ತಿಯಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡು ಭರ್ಜರಿ ವ್ಯಾಪಾರ ನಡೆಸಿದರು.