ಮಾನಸಿಕವಾಗಿ ಗಂಡು ಹೆಣ್ಣಾದರೆ ಅಪೂತಪೂರ್ವ ಬದಲಾವಣೆ ಸಾಧ್ಯ: ಲಕ್ಷ್ಮೀಶ ತೋಳ್ಪಾಡಿ
ಉಡುಪಿ, ನ.14: ಸಾಂಸ್ಕೃತಿಕ ಪರಿವರ್ತನೆ ಹಾಗೂ ನಾಗರಿಕ ಪ್ರಜ್ಞೆಯಲ್ಲಿ ಮೂಲಭೂತ ಬದಲಾವಣೆ ಆಗಬೇಕಾದರೆ ಗಂಡಸು ಮಾನಸಿಕವಾಗಿ ಹೆಂಗಸು ಆಗಬೇಕು. ಆಗ ಅಭೂತಪೂರ್ವ ಬದಲಾವಣೆ ಆಗಲು ಸಾಧ್ಯ ಎಂದು ಸಾಂಸ್ಕೃತಿಕ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದ್ದಾರೆ.
ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಯಕ್ಷಗಾನ ಸ್ತ್ರೀವೇಷ ಧಾರಿ ಡಾ.ಕೋಳ್ಯೂರು ರಾಮಚಂದ್ರ ರಾಯರ 90ರ ಹುಟ್ಟುಹಬ್ಬದ ಗೌರವಾರ್ಥ ಕಲಾಭಿಯಾನ ಕೋಳ್ಯೂರು ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೋಳ್ಯೂರು ರಾಮಚಂದ್ರ ರಾಯರ ಪಾತ್ರಗಳು ಯಕ್ಷಗಾನದಲ್ಲಿ ಚಿರಂಜೀವಿ. ಸ್ತ್ರೀವೇಷದಲ್ಲಿ ಅವರನ್ನು ಮೀರಿಸುವ ಕಲಾವಿದರಿಲ್ಲ. ಸ್ತ್ರೀಪಾತ್ರ ಅವರಿಗೆ ನೈಸರ್ಗಿಕವಾಗಿಯೇ ಕರಗತವಾಗಿದೆ. ಯಕ್ಷಗಾನ ಕಲಾವಿದರೆಲ್ಲರಿಗೂ ಸ್ತ್ರೀಪಾತ್ರ ಮಾಡುವ ಅವಕಾಶ ಅಥವಾ ಯೋಗ ಸಿದ್ಧಿಸುವುದಿಲ್ಲ. ಆದರೆ ರಾಮಚಂದ್ರ ರಾಯರಲ್ಲಿ ಸ್ತ್ರೀಪಾತ್ರ ಮಾಡುವ ಪೂರ್ಣ ಪ್ರಮಾಣದ ಯೋಗ ಸಿದ್ಧಿಸಿದೆ ಎಂದರು.
ಪರ್ಯಾಯ ಪೀಠಾಧೀಶ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ಸಾವಿರಾರು ವರ್ಷಗಳಿಂದ ದೇಶದ ಮೇಲೆ ಸಾಂಸ್ಕೃತಿ ದಾಳಿಗಳು ನಡೆದಿದ್ದು, ಆದರೂ ಭಾರತೀಯ ಸಂಸ್ಕೃತಿ ಉಳಿದಿರಲು ಅನೇಕ ಮಂದಿಯ ತ್ಯಾಗವೇ ಕಾರಣವಾಗಿದೆ. ಕಲಾವಿದರು ಕಲೆಗಾಗಿ ತಮ್ಮ ಜೀನವವನ್ನು ಮುಡಿ ಪಾಗಿಟ್ಟ ಪರಿಣಾಮ ಇಂದು ನಮ್ಮ ಸಂ್ಕೃತಿ ಈ ಮಟ್ಟಕ್ಕೆ ಬೆಳೆದಿದೆ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನ ಸ್ತ್ರೀಪಾತ್ರದಲ್ಲಿ 70 ವರ್ಷಗಳ ಸುಧೀರ್ಘ ಸೇವೆ ನೀಡಿದ ಡಾ.ಕೋಳ್ಯೂರು ರಾಮಚಂದ್ರ ರಾಯರನ್ನು ಸನ್ಮಾನಿಸಲಾಯಿತು. ಆನ್‌ಲೈನ್ ಮೂಲಕ ಭರತನಾಟ್ಯ ಕಲಾವಿದೆ ವಿದುಷಿ ಡಾ.ಪದ್ಮಸುಬ್ರಹ್ಮಣ್ಯಮ್ ಹಾಗೂ ಕಥಕಳಿ ಕಲಾವಿದ ಡಾ.ಕಲಾಮಂಡಲಂ ಗೋಪಿ ಶುಭಾಶಂಸನೆಗೈದರು.
ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಹಿರಿಯ ಸಾಹಿತಿ ಎ.ಪಿ.ಮಾಲತಿ ಉಪಸ್ಥಿತರಿದ್ದರು. ಕಲಾರಂಗದ ವೇದಿಕೆಯ ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.