ಮಣಿಪಾಲದಿಂದ ಉಡುಪಿರೆಗೆ ಮಧುಮೇಹ ಸೈಕಲ್ ಜಾಥಾ
ಮಣಿಪಾಲ, ನ.14: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಎಂಡೋ ಕ್ರೈನೊಲೊಜಿ ವಿಭಾಗದ ವತಿಯಿಂದ ಮಧುಮೇಹ ದಿನಾಚರಣೆ ಪ್ರಯುಕ್ತ ಮಣಿಪಾಲದಿಂದ ಉಡುಪಿಯವರೆಗೆ ಸೈಕಲ್ ಜಾಥವನ್ನು ರವಿವಾರ ಆಯೋಜಿಸಲಾಗಿತ್ತು.
ಆಸ್ಪತ್ರೆಯ ಹೊರರೋಗಿ ವಿಭಾಗದ ಮುಂದೆ ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸೈಕಲ್ ಜಾಥಕ್ಕೆ ಚಾಲನೆ ನೀಡಿದರು. ಮಣಿಪಾಲದಿಂದ ಆರಂಭವಾದ ಜಾಥವು, ಸಿಂಡಿಕೇಟ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಸರ್ಕಲ್, ಅಂಬಲಪಾಡಿ, ಬ್ರಹ್ಮಗಿರಿ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸಮಾಪನಗೊಂಡಿತು. 500ಕ್ಕೂ ಹೆಚ್ಚು ಮಂದಿ ಸೈಕಲ್ ಜಾಥದಲ್ಲಿ ಭಾಗವಹಿಸಿದ್ದರು.
ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಡಾ. ಎಚ್.ಎಚ್.ಬಲ್ಲಾಳ್ ಮಾತನಾಡಿ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಜೀವನದ ಮೌನ ಕೊಲೆಗಾರರಾಗಿದ್ದು, ಸಾಮಾನ್ಯ ಜನರಿಗೆ ರೋಗದ ತೀವ್ರತೆ ಅರ್ಥವಾಗುವುದಿಲ್ಲ. ಬಹಳ ಮುಖ್ಯವಾಗಿ ಶೇ.50ರಷ್ಟು ಮಧುಮೇಹ ರೋಗಿ ಗಳಿಗೆ ಆರಂಭಿಕ ಹಂತದಲ್ಲಿ ಪತ್ತೆ ಆಗಿರುವುದಿಲ್ಲ. ಮಧುಮೇಹವು ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅರಿವು ಮತ್ತು ರೋಗ ಪತ್ತೆ ನಡೆಯುವುದು ಮುಖ್ಯವಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಮಾತನಾಡಿ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಈಗ ತುಂಬಾ ಸಣ್ಣ ಪ್ರಾಯದವರಲ್ಲಿ ಕಂಡು ಬರುತ್ತಿವೆ. ಇದಕ್ಕೆ ಕಾರಣ ಮಕ್ಕಳಿಗೆ ಮತ್ತು ಯುವಕರಿಗೆ ದೈಹಿಕ ಚಟುವಟಿಕೆಗಳು ಸಿಗದೆ ಇರುವುದು. ಆದ್ದರಿಂದ ಸಮಯ ಸಿಕ್ಕಾಗಲೆಲ್ಲಾ ಮಕ್ಕಳು ಮತ್ತು ಯುವಕರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಣಿಪಾಲ ಹೆಲ್ತ್ ಸೈನ್ಸ್‌ನ ಸಹಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ನ ಡೀನ್ ಡಾ.ಅರುಣ್ ಮಯ್ಯ, ಕೆಎಂಸಿ ಡೀನ್ ಡಾ.ಶರತ್ ರಾವ್, ಕೆಎಂಸಿ ಮುಖ್ಯ ನಿರ್ವಹಣಾಧಿ ಕಾರಿ ಸಿ.ಜಿ.ಮುತ್ತಣ್ಣ ಉಪಸ್ಥಿತರಿದ್ದರು.
ಕೆಎಂಸಿ ಎಂಡೋ ಕ್ರೈನೊಲೊಜಿ ವಿಭಾಗದ ಮುಖ್ಯಸ್ಥೆ ಡಾ.ಸಹಾನಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅವಿನಾಶ್ ಶೆಟ್ಟಿ ವಂದಿಸಿದರು.