ಸಿರಿಯಾ ಪ್ರಜೆಗಳ ಹತ್ಯೆಗೆ ಕಾರಣವಾಗಿದ್ದ ವಾಯುದಾಳಿಯನ್ನು ರಹಸ್ಯವಾಗಿರಿಸಿದ್ದ ಅಮೆರಿಕ: ನ್ಯೂಯಾರ್ಕ್ ಟೈಮ್ಸ್ ವರದಿ

Update: 2021-11-14 17:47 GMT

ವಾಷಿಂಗ್ಟನ್, ನ.14: ಇಸ್ಲಾಮಿಕ್ ಸ್ಟೇಟ್ ಸಂಘಟನೆ(ಐಸಿಸ್) ಯ ವಿರುದ್ಧ ಅಮೆರಿಕದ ಸೇನೆ 2019ರಲ್ಲಿ ನಡೆಸಿದ್ದ ವಾಯುದಾಳಿಯ ಬಗ್ಗೆ ಅಮೆರಿಕ ರಹಸ್ಯ ಕಾಯ್ದುಕೊಂಡಿದ್ದು, ಮಹಿಳೆಯರು, ಮಕ್ಕಳ ಸಹಿತ 64 ಮಂದಿಯ ಸಾವಿಗೆ ಕಾರಣವಾದ ಈ ದಾಳಿ ಸಂಭವನೀಯ ಯುದ್ಧಾಪರಾಧವಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. 

ಸಿರಿಯಾದಲ್ಲಿ ಭೂಸೇನಾ ಕಾರ್ಯಾಚರಣೆಯ ಜವಾಬ್ದಾರಿ ನಿರ್ವಹಿಸಿದ್ದ ಅಮೆರಿಕದ ವಿಶೇಷ ಕಾರ್ಯಾಪಡೆಯ ನಿರ್ದೇಶನದಂತೆ ಬಗುಝ್ ನಗರದ ಬಳಿ ಈ 2 ಸತತ ವಾಯುದಾಳಿ ನಡೆಸಲಾಗಿದೆ. ಸಿರಿಯಾದಲ್ಲಿ ಅಮೆರಿಕ ನಡೆಸಿದ್ದ ವಾಯುದಾಳಿಯ ಮೇಲುಸ್ತುವಾರಿ ವಹಿಸಿದ್ದ ಅಮೆರಿಕದ ಸೆಂಟ್ರಲ್ ಕಮಾಂಡ್ ವಿಭಾಗ ಮೊದಲ ಬಾರಿಗೆ ವಾಯದಾಳಿಯನ್ನು ಒಪ್ಪಿಕೊಂಡಿದ್ದು ಈ ವಾಯುದಾಳಿಯನ್ನು ಸಮರ್ಥಿಸಿಕೊಂಡಿದೆ ಎಂದು ಪತ್ರಿಕೆಯ ವರದಿ ತಿಳಿಸಿದೆ. 

ಈ ಮಧ್ಯೆ, ಶನಿವಾರ ಹೇಳಿಕೆ ನೀಡಿರುವ ಸೆಂಟ್ರಲ್ ಕಮಾಂಡ್ ‘ ವಾಯುದಾಳಿಯಲ್ಲಿ 16 ಐಸಿಸ್ ಸದಸ್ಯರು, 4 ನಾಗರಿಕರ ಸಹಿತ 80 ಮಂದಿ ಮೃತಪಟ್ಟಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ಗೆ ಮಾಹಿತಿ ನೀಡಿದ್ದೇವೆ. ಆದರೆ ಇತರ 60 ಮಂದಿ ನಾಗರಿಕರೇ ಎಂಬುದು ಸ್ಪಷ್ಟವಾಗಿಲ್ಲ ಎಂದಿದೆ. ಇದೊಂದು ನ್ಯಾಯಸಮ್ಮತ ಸ್ವರಕ್ಷಣೆಯ ಕೃತ್ಯವಾಗಿದೆ ಮತ್ತು ಈ ಸಂದರ್ಭ ನಾಗರಿಕರು ಆ ಪ್ರದೇಶದಿಂದ ದೂರ ಸರಿಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಮಾಯಕರ ಪ್ರಾಣಕ್ಕೆ ಅಪಾಯವಾಗುವುದನ್ನು ನಾವು ಬಯಸುವುದಿಲ್ಲ ಮತ್ತು ಇವುಗಳನ್ನು ನಿವಾರಿಸಲು ಎಲ್ಲಾ ಸಂಭವನೀಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಪ್ರಕರಣವನ್ನು ನಾವು ಸ್ವಯಂ ವರದಿ ಮತ್ತು ತನಿಖೆ ಮಾಡಿದ್ದು ನಮ್ಮಲ್ಲಿರುವ ಪುರಾವೆಗಳ ಪ್ರಕಾರ, ಉದ್ದೇಶವಿಲ್ಲದೆ ಆಗಿರುವ ಪ್ರಾಣಹಾನಿಯ ಬಗ್ಗೆ ಸಂಪೂರ್ಣ ಹೊಣೆಯನ್ನು ಹೊರುತ್ತೇವೆ’ ಎಂದು ಹೇಳಿಕೆ ತಿಳಿಸಿದೆ. 

ಘಟನೆಗೆ ಸಂಬಂಧಿಸಿದ ವೀಡಿಯೊ ಪುರಾವೆಯಲ್ಲಿ ಶಸ್ತ್ರಸಜ್ಜಿತ ಹಲವು ಮಹಿಳೆಯರು ಹಾಗೂ ಕನಿಷ್ಟ ಒಬ್ಬ ಬಾಲಕನ ಬಗ್ಗೆ ಮಾಹಿತಿ ದೊರಕಿದೆ. ಆದ್ದರಿಂದ ಮೃತಪಟ್ಟ ಇತರ 60 ಮಂದಿಯಲ್ಲಿ ಬಹುತೇಕರು ಬಂಡುಗೋರ ಸಂಘಟನೆಯ ಸದಸ್ಯರಾಗಿರುವ ಸಾಧ್ಯತೆಯಿದೆ. ಸಿರಿಯದ ಪಡೆಗಳ ಮೇಲೆ ಭಾರೀ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ದೊರಕಿದ ಬಳಿಕ ಮತ್ತು ಈ ಪ್ರದೇಶದಲ್ಲಿದ್ದ ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಸಿರಿಯಾ ಪಡೆಗಳು ತಿಳಿಸಿದ ಬಳಿಕ ವಾಯು ದಾಳಿ ನಡೆದಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ. 2019ರ ಮಾರ್ಚ್ 18ರಂದು ನಡೆದಿದ್ದ ಈ ದಾಳಿಯ ಬಗ್ಗೆ ಸೇನೆಯ ನಡೆದ ತನಿಖೆಯ ವರದಿಯಲ್ಲಿ ಬಾಂಬ್ ದಾಳಿ ನಡೆದ ಬಗ್ಗೆ ಉಲ್ಲೇಖಿಸಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News