ಇಸ್ರೇಲ್ ನಿಷೇಧ ಹೇರಿದ್ದರೂ ಮಾನವ ಹಕ್ಕು ಹೋರಾಟ ಸ್ಥಗಿತವಿಲ್ಲ: ಪೆಲೆಸ್ತೀನ್ ನ ಸಂಘಟನೆಗಳ ಘೋಷಣೆ

Update: 2021-11-14 18:28 GMT

ಜೆರುಸಲೇಂ, ನ.14: ತಮ್ಮ ಸಂಘಟನೆಯನ್ನು ಇಸ್ರೇಲ್ ಅಧಿಕಾರಿಗಳು ನಿಷೇಧಿಸಿ, ಪೆಗಾಸಸ್ ಸ್ಪೈವೇರ್ ಮೂಲಕ ಫೋನ್ಗಳನ್ನು ಹ್ಯಾಕ್ ಮಾಡಿದ್ದರೂ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಪೆಲೆಸ್ತೀನ್ನ ನಾಗರಿಕ ಸಂಘಟನೆಯ ಸಿಬಂದಿಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ರಾಜಕೀಯ ಕಾರ್ಯಕರ್ತರು ಹೇಳಿದ್ದಾರೆ. ‌

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ 6 ಪೆಲೆಸ್ತೀನ್ ಸಂಘಟನೆಗಳನ್ನು ಹಾಗೂ ಮಾನವ ಹಕ್ಕು ಸಂಸ್ಥೆಗಳನ್ನು ‘ಭಯೋತ್ಪಾದಕ ಗುಂಪು’ ಎಂದು ಅಕ್ಟೋಬರ್ 19ರಂದು ಇಸ್ರೇಲ್ ಘೋಷಿಸಿತ್ತು. ಎಡಪಂಥೀಯ ‘ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪೆಲೆಸ್ತೀನ್(ಪಿಎಫ್ಎಲ್ಪಿ) ಸಂಘಟನೆಯೊಂದಿಗೆ ಈ ಸಂಸ್ಥೆಗಳು ಸಂಪರ್ಕ ಹೊಂದಿವೆ ಎಂದು ಇಸ್ರೇಲ್ ಪ್ರತಿಪಾದಿಸಿದೆ. ಆದರೆ ಇದನ್ನು ನಿರಾಕರಿಸಿರುವ ಮಾನವ ಹಕ್ಕು ಸಂಘಟನೆಗಳು, ಇಸ್ರೇಲ್ ತನ್ನ ಆರೋಪಕ್ಕೆ ಪೂರಕ ಸಾಕ್ಷಿ ಒದಗಿಸುವಂತೆ ಆಗ್ರಹಿಸಿವೆ. ಏನೇ ಆಗಲಿ, ಪೆಲೆಸ್ತೀನಿಯರಿಗೆ ನೆರವಾಗುವ ಕಾರ್ಯವನ್ನೂ ತಾನು ಮುಂದುವರಿಸುತ್ತೇನೆ ಎಂದು ‘ಅದ್ದಮೀರ್ ಪ್ರಿಸನರ್ ಗ್ರೂಪ್’ನ ವಕೀಲ ಸಲೇಹ್ ಹವ್ಮೌರಿ ಹೇಳಿದ್ದಾರೆ. ಈ ಸಂಘಟನೆಯನ್ನೂ ಇಸ್ರೇಲ್ ನಿಷೇಧಿಸಿದೆ. 

ಜೆರುಸಲೇಂನ ಪೆಲೆಸ್ತೀನ್-ಫ್ರಾನ್ಸ್ ರಾಷ್ಟ್ರೀಯನಾಗಿರುವ ಹವ್ಮೌರಿ‘ ಇಸ್ರೇಲ್ ದೇಶದ ನಂಬಿಕೆಯನ್ನು ಉಲ್ಲಂಸಿರುವುದರಿಂದ ಅವರಿಗೆ ನೀಡಿರುವ ಜೆರುಸಲೇಮ್ ನಿವಾಸಿ ಪರವಾನಿಗೆಯನ್ನು ರದ್ದುಮಾಡುವುದಾಗಿ ’ ಇಸ್ರೇಲ್ನ ಆಂತರಿಕ ಸಚಿವಾಲಯ ಘೋಷಿಸಿದೆ. ಇದೀಗ ಅವರು ಜೆರುಸಲೇಂನಿಂದ ಗಡೀಪಾರಾಗುವ ಸಾಧ್ಯತೆಯಿದೆ. ಬಂಧನದ ಭೀತಿ ಇರುವುದರಿಂದ ರಮಲ್ಲಾ ನಗರಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ರಮಲ್ಲಾದಿಂದ ಹೊರಗೆ ತೆರಳಿದರೆ ಇಸ್ರೇಲ್ ಸೇನೆ ಬಂಧಿಸಬಹುದು’ ಎಂದು ಹವ್ಮೌರಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News