ʼಜೈ ಭೀಮ್ʼ ನಿರ್ಮಾಪಕರ ವಿರುದ್ಧ ಕಾನೂನು ನೋಟಿಸ್: ಟ್ವಿಟರ್‌ ನಲ್ಲಿ #ವಿಸ್ಟ್ಯಾಂಡ್‍ವಿದ್‌ಸೂರ್ಯ ಟ್ರೆಂಡಿಂಗ್

Update: 2021-11-15 13:08 GMT
Photo: Mirchi9

ಚೆನ್ನೈ: ತಮಿಳು ನಟ ಸೂರ್ಯ ಅವರ ಅಭಿನಯದ ಯಶಸ್ವೀ ಚಿತ್ರ ಜೈ ಭೀಮ್ ನಲ್ಲಿ ಪೊಲೀಸ್ ಪಾತ್ರಧಾರಿಯೊಬ್ಬರನ್ನು ಉದ್ದೇಶಪೂರ್ವಕವಾಗಿ ವಣ್ಣಿಯಾರ್  ಸಮುದಾಯಕ್ಕೆ ಸೇರಿದವರೆಂದು ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಿರ್ದೇಶಕ ಟಿ ಜೆ ಜ್ಞಾನವೇಲ್ ಸಹಿತ ಇತರರಿಗೆ ಕಾನೂನು ನೋಟಿಸ್ ಜಾರಿಯಾದ ಬೆನ್ನಿಗೇ ಸಾಮಾಜಿಕ ಜಾಲತಾಣಿಗರು ನಟ ಸೂರ್ಯ ಅವರಿಗೆ ಬೆಂಬಲವಾಗಿ ನಿಂತಿದ್ದು #ವಿಸ್ಟ್ಯಾಂಡ್‍ವಿದ್‍ಸೂರ್ಯ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಮಾಜಿ ಕೇಂದ್ರ ಸಚಿವ ಹಾಗೂ ಪಿಎಂಕೆ ನಾಯಕ ಡಾ. ಅಂಬುಮನಿ ರಾಮದೋಸ್ ಅವರು  ಸೂರ್ಯ ವಿರುದ್ಧ ಕಿಡಿ ಕಾರಿ ಅವರು ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದ ಬೆನ್ನಲ್ಲೇ ಕಾನೂನು ನೋಟಿಸ್ ಜಾರಿಯಾಗಿದೆ. ವಣ್ಣಿಯಾರ್  ತಮಿಳುನಾಡಿನಲ್ಲಿ ಅತ್ಯಂತ ಹಿಂದುಳಿದ ಜಾತಿಯಾಗಿದ್ದು  ಉತ್ತರ ತಮಿಳುನಾಡಿನಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿರುವ ಸಮುದಾಯವಾಗಿದೆ. ಜೈ ಭೀಮ್ ಒಂದು ನಿಜ ಜೀವನಾಧರಿತ ಚಿತ್ರವಾಗಿದೆ.

ನಟ ಸೂರ್ಯ ಅವರನ್ನು ಬೆಂಬಲಿಸಿ ಸಿಪಿಐ(ಎಂ) ಕೂಡ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‍ನಲ್ಲಿ ಟ್ವೀಟ್ ಒಂದನ್ನು ಪೋಸ್ಟ್ ಮಾಡಿದೆ.

"ನಟ ಸೂರ್ಯ ಅವರು ಸಿಪಿಐ(ಎಂ) ಅನ್ನು ಶ್ಲಾಘಿಸಿದ್ದಾರೆ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಯಾವತ್ತೂ ತುಳಿತಕ್ಕೊಳಗಾದವರನ್ನು ಬೆಂಬಲಿಸುತ್ತದೆ ಎಂದು ಬರೆದಿದ್ದಾರೆ.  ಲಾಕಪ್ ಸಾವು ಪ್ರಕರಣದ ಸಂತ್ರಸ್ತ ರಾಜ ಕಣ್ಣು ಅವರ ಪತ್ನಿ ಪಾರ್ವತಿಗೆ ಸಹಾಯ ಮಾಡಲು ಕೂಡ ಸುರಿಯ ಮುಂದೆ ಬಂದಿದ್ದಾರೆ ಹಾಗೂ ಆಕೆಯ ಹೆಸರಿನಲ್ಲಿ ರೂ 10 ಲಕ್ಷ ಠೇವಣಿಯಿರಿಸಿದ್ದಾರೆ," ಎಂದು ಪಕ್ಷ ಟ್ವೀಟ್ ಮಾಡಿದೆ.

ರಾಜ ಕಣ್ಣು ಅವರ ನಿಜ ಜೀವನ ಆಧರಿಸಿ ಜೈ ಭೀಮ್ ಚಿತ್ರ ನಿರ್ಮಾಣಗೊಂಡಿದೆ.

"ಅವರ ಶ್ರಮಕ್ಕೆ ಹಾಗೂ ಈ ಕಷ್ಟಕರ ಸಮಯದಲ್ಲಿ ಸಮಾಜಕ್ಕೆ ಅವರ ಕೊಡುಗೆಗಾಗಿ#ವಿಸ್ಟ್ಯಾಂಡ್‍ವಿದ್‍ಸೂರ್ಯ" ಎಂದು ಮನೋಬಲ ವಿಜಯಬಾಲನ್ ಎಂಬವರು ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಸೂರ್ಯ ಅವರ ವಕೀಲ ಚಂದ್ರ ಪಾತ್ರ ನಿರ್ವಹಿಸಿದ್ದಾರೆ. ಸುಳ್ಳು ಆರೋಪಗಳ ಮೇಲೆ ಬಂಧಿತ ತನ್ನ ಪತಿ ರಾಜಕಣ್ಣು ಅವರನ್ನು ರಕ್ಷಿಸಲು ಸೆಂಗ್ಗೆನಿ ಎಂಬ ಆದಿವಾಸಿ ಮಹಿಳೆ ವಕೀಲ ಚಂದ್ರು ಸಹಾಯ ಕೋರಿದ ನಂತರ ಸತ್ಯವನ್ನು ಅನಾವರಣಗೊಳಿಸುವ ಚಂದ್ರು ಪಯಣವನ್ನು ಈ ಚಿತ್ರ ಬಿಂಬಿಸುತ್ತದೆ.

ಸೂರ್ಯ ಅವರ ಹೊರತಾಗಿ ಅವರ ಪತ್ನಿ ಹಾಗೂ ನಟಿ ಜ್ಯೋತಿಕ, ಅವರ ಒಡೆತನದ ನಿರ್ಮಾಣ ಸಂಸ್ಥೆ 2ಡಿ ಎಂಟರ್‍ಟೈನ್ಮೆಂಟ್ ಲಿ. ಹಾಗೂ ಅಮೆಜಾನ್.ಇನ್ ನ ಪ್ರತಿನಿಧಿಯೊಬ್ಬರ ಹೆಸರನ್ನೂ ಕಾನೂನು ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News