ಭೋಪಾಲ್ ನ ಹಬೀಬ್‍ಗಂಜ್ ರೈಲು ನಿಲ್ದಾಣ ಈಗ ರಾಣಿ ಕಮಲಾಪತಿ ರೈಲು ನಿಲ್ದಾಣ: ಪ್ರಧಾನಿಯಿಂದ ಉದ್ಘಾಟನೆ

Update: 2021-11-15 13:14 GMT
Photo: Indiatimes, Twitter/rbsinghkhalsa

ಭೋಪಾಲ್:  ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಭೋಪಾಲ್ ನಗರದ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಹಿಂದೆ ಹಬೀಬ್‍ಗಂಜ್ ರೈಲು ನಿಲ್ದಾಣ ಎಂಬ ಹೆಸರಿದ್ದ ಈ ನಿಲ್ದಾಣದ ಹೆಸರನ್ನು ಬದಲಾಯಿಸಲು ಮಧ್ಯ ಪ್ರದೇಶ ಸರಕಾರ ಈ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಅನುಮೋದಿಸಿದ ನಂತರ ನಿಲ್ದಾಣಕ್ಕೆ ಹೊಸ ಹೆಸರು ದೊರಕಿದೆ.

ಕಳೆದ ವಾರವಷ್ಟೇ ಹೆಸರು ಬದಲಾವಣೆಯ ಪ್ರಸ್ತಾವನೆಯನ್ನು ಸರಕಾರ ಸಲ್ಲಿಸಿತ್ತು. ಗೊಂಡ್ ಸಮುದಾಯದ ರಾಣಿಯ ಗೌರವಾರ್ಥ ನಿಲ್ದಾಣದ ಹೆಸರು ಬದಲಾಯಿಸುವ ಉದ್ದೇಶವಿದೆ ಎಂದು ಸರಕಾರ ಹೇಳಿತ್ತು.

ಗೊಂಡ್  ಸಾಮ್ರಾಜ್ಯದ 18ನೇ ಶತಮಾನದ ರಾಜನಾಗಿದ್ದ ನಿಜಾಮ್ ಶಾ  ಎಂಬಾತನ ಪತ್ನಿಯೇ ಕಮಲಾಪತಿ ಆಗಿದ್ದಾಳೆ.  ನಿಜಾಮ್ ಶಾ 18ನೇ ಶತಮಾನದಲ್ಲಿ ಭೋಪಾಲದಿಂದ 55 ಕಿಮೀ ದೂರವಿರುವ ಗೊನ್ನೋರಘರ್ ರಾಜನಾಗಿದ್ದ.  ದೇಶದ ಆದಿವಾಸಿ ಸಮುದಾಯಗಳ ಪೈಕಿ ಅತ್ಯಂತ ದೊಡ್ಡ ಸಮುದಾಯ ಗೊಂಡ್ ಸಮುದಾಯವಾಗಿದೆ.

ಕಮಲಾಪತಿ ಭೋಪಾಲದ ಕೊನೆಯ ಹಿಂದು ರಾಣಿ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಈ ಹಿಂದೆ ಹೇಳಿದ್ದು ಆಕೆ ಜಲ ನಿರ್ವಹಣೆ, ಪಾರ್ಕು, ದೇವಳಗಳ ನಿರ್ಮಾಣ ಕಾರ್ಯ ಸಾಕಷ್ಟು ಮಾಡಿದ್ದಳು ಎಂದೂ ಅವರು ಹೇಳಿದ್ದರು.

ಆದಿವಾಸಿ ಸಮುದಾಯಗಳ ಕೊಡುಗೆಯನ್ನು ಗೌರವಿಸಲು ಇಂದು ಜನಜಾತೀಯ ಗೌರವ್ ದಿವಸ್ ಆಚರಿಸುವ ಸಂದರ್ಭ ಈ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣ ಉದ್ಘಾಟನೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News