"ದಲಿತರ ಮನೆಗಳಲ್ಲಿ ಚಹಾ ಸೇವಿಸಿ": ಬಿಜೆಪಿ ಕಾರ್ಯಕರ್ತರಿಗೆ ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷರ ಕರೆ

Update: 2021-11-15 13:18 GMT

ಲಕ್ನೋ: "ನಿಮ್ಮ ಸಮೀಪದ 10-100 ದಲಿತರ ಮನೆಗಳಲ್ಲಿ ಚಹಾ ಸೇವಿಸಿ,  ಮತಗಳನ್ನು ಜಾತಿ, ಹಣ ಅಥವಾ ಪ್ರಾಂತೀಯತೆಯ ಆಧಾರದಲ್ಲಿ ಚಲಾಯಿಸಲಾಗುವುದಿಲ್ಲ, ಬದಲು ಮತಗಳನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಚಲಾಯಿಸಲಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿ" ಎಂದು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸಿಂಗ್ ಅವರು ವೈಶ್ಯ ವ್ಯಾಪತಿ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಮೇಲಿನಂತೆ ಹೇಳಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿಯ ಇತರ ಹಿಂದುಳಿದ ವರ್ಗಗಳ ಸಾಮಾಜಿಕ್ ಪ್ರತಿನಿಧಿ ಸಮ್ಮೇಳನದಲ್ಲೂ ಅವರು ಇಂತಹುದೇ ಮಾತುಗಳನ್ನಾಡಿದ್ದಾರೆ. ಇತರ ಸಮುದಾಯದ ಜನರ ಬಳಿ ತೆರಳುವುದರ ಜತೆಗೆ ದಲಿತರ ಹಾಗೂ ತುಳಿತಕ್ಕೊಳಗಾದ ಕುಟುಂಬಗಳ ಜತೆ ಸಂವಹನ ನಡೆಸಬೇಕೆಂದು ಈ ಕಾರ್ಯಕ್ರಮದಲ್ಲಿ ಸಿಂಗ್ ಕಾರ್ಯಕರ್ತರಿಗೆ ಕರೆ ನೀಡಿದ್ದರು.

"ನಿಮಗೆ ಅಲ್ಲಿ ಚಹಾ ನೀಡಿದರೆ, ನಿಮ್ಮ  ಘನತೆ ಸರಿಯಾಗಿದೆ ಎಂದರ್ಥ. ನಿಮಗೆ ಚಹಾ ಜತೆಗೆ ಗೇರುಬೀಜ ನೀಡಿದರೆ ನಿಮ್ಮ ಘನತೆ ಇನ್ನೂ ಹೆಚ್ಚಾಗಿದೆ ಎಂದರ್ಥ. ಅವರು ನಿಮಗೆ ಚಹಾ ಜತೆಗೆ ಊಟಕ್ಕೂ ಕರೆದರೆ ಆ ಕುಟುಂಬ ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದರ್ಥ" ಎಂದು ಸಿಂಗ್ ಹೇಳಿದರು.

ಶ್ರೀ ರಾಮನಿಗಾಗಿ ಬಿಜೆಪಿಯು 2022ರಲ್ಲಿ ಉತ್ತರ ಪ್ರದೇಶದಲ್ಲಿ  ಸರಕಾರ ಮತ್ತೆ ರಚಿಸಬೇಕು ಎಂದೂ ಅವರು ಹೇಳಿಕೊಂಡಿದ್ದಾರೆ. ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿ ಆದ ನಂತರ ಗೂಂಡಾ ರಾಜ್ ಅಂತ್ಯವಾಗಿದೆ ಹಾಗೂ ಜನರು ಸುರಕ್ಷತೆಯ ಭಾವನೆ ಹೊಂದಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News