×
Ad

ಅಂತರ್ಜಾಲ ದುರ್ಬಳಕೆಯ ಸಮಸ್ಯೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ: ಡಾ.ರಮೀಳಾ ಶೇಖರ್

Update: 2021-11-15 21:54 IST

ಮಂಗಳೂರು, ನ.15: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಂತರ್ಜಾಲ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಇದರಿಂದ ಮಾನಸಿಕವಾಗಿ ಕುಗ್ಗುದರ ಜೊತೆಗೆ ದೈಹಿಕ ಮತ್ತು ಲೈಂಗಿಕ ಹಿಂಸೆಗೆ ಒಳಗಾಗಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕೈಯಲ್ಲಿರುವ ಮೊಬೈಲ್ ಫೋನಿನ ಮಿತವಾದ ಬಳಕೆ ಮತ್ತು ಅಂತರ್ಜಾಲ ಉಪಯೋಗದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಿರಂತರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮಂಗಳೂರಿನ ಮಾನಸಿಕ ಆರೋಗ್ಯ ತಜ್ಞೆ ಡಾ.ರಮೀಳಾ ಶೇಖರ್ ಹೇಳಿದ್ದಾರೆ.

ಅವರು ಚೈಲ್ಡ್‌ಲೈನ್, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದ ಸಹಕಾರದಲ್ಲಿ ನಗರದ ರೋಶನಿ ನಿಲಯದಲ್ಲಿ ಚೈಲ್ಡ್‌ಲೈನ್ ಸೇ ದೋಸ್ತಿ ಅಂಗವಾಗಿ ಜೋತಿಯ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಅಂತರ್ಜಾಲ ಸುರಕ್ಷತೆಯ ಕುರಿತು ಪಿಯು ವಿಭಾಗದ ಮಕ್ಕಳಿಗೆ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮೊಬೈಲ್ ಫೋನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಅರಿವಿಲ್ಲದೇ ತಮ್ಮ ಭಾವ ಚಿತ್ರಗಳನ್ನು ಕಳುಹಿಸುವುದು, ನಂತರ ನಿಂಧನೆಗೆ ಒಳಗಾಗುತ್ತಿರುವವರ ಸಂಖ್ಯೆ ಕಳೆದ 2 ವರ್ಷಗಳಿಂದ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇದರಿಂದ ಮಕ್ಕಳಲ್ಲಿ ಮೊಬೈಲನ್ನು ಫೋನ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಯಾವುದೇ ಮಗು ತಪ್ಪುಮಾಡಲು ಸಾಧ್ಯವಿಲ್ಲ. ಒಂದು ವೇಳೆ ತಪ್ಪು ಮಾಡಿದರೂ ಸೂಕ್ತ ತಿಳಿವಳಿಕೆಯನ್ನು ಮಗು ಸ್ನೇಹಿಕವಾಗಿ ನೀಡಬೇಕೆ ಹೊರತು ಮಾನಸಿಕವಾಗಿ ಹಿಂಸೆ ನೀಡುವುದು ಅಪರಾಧ. ಆದ್ದರಿಂದ ಮಕ್ಕಳಿಗೆ ಯಾರಾದರೂ ಮೊಬೈಲ್ ಮೂಲಕ ಕೆಟ್ಟದಾಗಿ ಸಂದೇಶ ಕಳುಹಿಸಿ ತೊಂದರೆ ನೀಡುತ್ತಿದ್ದರೆ ಕೂಡಲೇ ಚೈಲ್ಡ್‌ಲೈನ್-1098ಕ್ಕೆ ಕರೆ ಮಾಡಿ ತಿಳಿಸುವಂತೆ ಅವರು ಹೇಳಿದರು.

ವೇದಿಕೆಯಲ್ಲಿ ಚೈಲ್ಡ್‌ಲೈನ್ ನೋಡಲ್ ಸಂಯೋಜಿ ಲವಿಟಾ ಡಿಸೋಜ, ಕೇಂದ್ರ ಸಂಯೋಜಕ ದೀಕ್ಷಿತ್ ಅಚ್ರಪ್ಪಾಡಿ, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಮಾರೈಟ್ ಜೆ.ಮಸ್ಕರೇನಸ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕರಾದ ಪ್ರತಿಮಾ, ಸಂಧ್ಯಾ, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಚೈಲ್ಡ್‌ಲೈನ್ ಸಿಬ್ಬಂದಿ ಉಪಸ್ಥಿತರಿದ್ದರು. ಮೇಘನಾ ಸ್ವಾಗತಿಸಿದರು. ಅರ್ಪಿತ ಕಾರ್ಯಕ್ರಮ ನಿರೂಪಿಸಿದರು. ಗೌತಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News