ಕೋವಿಡ್ ಅನುದಾನ ದುರುಪಯೋಗವಾಗದಂತೆ ನಿಗಾವಹಿಸಿ: ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ
ಮಂಗಳೂರು, ನ.15: ಕೋವಿಡ್ ನಿರ್ವಹಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗಾಗಿ ಪ್ರತಿಯೊಂದು ಗ್ರಾಪಂಗಳಿಗೆ ಸರಕಾರ ನೀಡಿದ ಅನುದಾನವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸದಂತೆ ನಿಗಾ ವಹಿಸಬೇಕು. ಅದು ಸದ್ಬಳಕೆಯಾಗುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ.ಪಿ. ವಿಶ್ವನಾಥ ಶೆಟ್ಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅವರು ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ನಿರ್ವಹಣೆ ಹಾಗೂ ಲೋಕಾಯುಕ್ತ ಪ್ರಕರಣಗಳ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರತಿಯೊಂದು ತಾಲೂಕುಗಳಲ್ಲಿಯೂ ಶೇ.100ರಷ್ಟು ಕೋವಿಡ್ ಲಸಿಕೆ ನೀಡುವ ಗುರಿಯನ್ನು ಈಡೇರಿಸಬೇಕು. ಅಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ತಮ್ಮ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿಕೊಂಡು ಬಗೆಹರಿಸಿಕೊಳ್ಳಬೇಕು. ಮುಂದಿನ 15-20 ದಿನಗಳೊಳಗೆ ಬಾಕಿ ಉಳಿದ ಶೇ.10 ಮೊದಲ ಡೋಸ್ ಲಸಿಕೆಯನ್ನು ಅರ್ಹ ಫಲಾನುಭವಿಗಳಿಗೆ ಕೊಡಿಸುವ ಮೂಲಕ ಶೇ.100ರ ಗುರಿ ತಲುಪಬೇಕು. ಗ್ರಾಮಗಳಲ್ಲಿ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಿ, ಅವರ ಬಳಿ ತೆರಳಿ, ಮುಖತಃ ಅವರಿಗೆ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಿ, ಲಸಿಕೆ ಪಡೆಯಲು ಪ್ರೇರೇಪಿಸಬೇಕು ಹಾಗೂ ಲಸಿಕೆ ಪಡೆಯಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಸಕಾರತ್ಮಕವಾಗಿ ಕೈಗೊಳ್ಳಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಶೇ.90ರಷ್ಟು ಹಾಗೂ ಎರಡನೇ ಡೋಸ್ ಅನ್ನು ಶೇ.59 ಮಂದಿ ಪಡೆದಿದ್ದಾರೆ. ಮೊದಲ ಡೋಸ್‌ನಲ್ಲಿ ಇನ್ನುಳಿದ ಶೇ.10ರಷ್ಟು ಜನರನ್ನು ಗುರುತಿಸಿ, ಆದ್ಯತೆಯ ಮೇರೆಗೆ ಅವರೆಲ್ಲರಿಗೂ ಲಸಿಕೆ ಕೊಡಿಸಬೇಕು. ಈ ಕಾರ್ಯವನ್ನು ಮುಂದಿನ 15-20 ದಿನದೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.
ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು, ಅಲ್ಲಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲನೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಶಿಕ್ಷಣ ಅಧಿಕಾರಿಗಳು ಆಗಾಗ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ನನಗೆ ಜಿಲ್ಲಾ ಪಂಚಾಯತ್ ಸಿಇಒ ಮೂಲಕ ವರದಿ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಜಿಲ್ಲೆಯಲ್ಲಿ 1,508 ಶಾಲೆಗಳಿದ್ದು, ಅವುಗಳಲ್ಲಿ 1,071 ಸರಕಾರಿ, 315 ಅನುದಾನಿತ, 400 ಅನುದಾನ ರಹಿತ, 11 ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ, 14 ಬುಡಕಟ್ಟು ಶಾಲೆಗಳು, 11 ನವೋದಯ, 2 ಕೇಂದ್ರೀಯ ವಿದ್ಯಾಲಯ ಹಾಗೂ ಒಂದು ಜವಾಹರ ನವೋದಯ ಶಾಲೆಗಳಲ್ಲಿ 3,20,980 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 1ರಿಂದ 5ನೇ ತರಗತಿಯವರೆಗೆ ಶೇ.51, 6-8ರ ವರೆಗೆ ಶೇ.69 ಹಾಗೂ 8-10 ಶೇ.81 ವಿದ್ಯಾರ್ಥಿಗಳು ಸದ್ಯ ಶಾಲಾ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ 210 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ, ಐದು ಮಕ್ಕಳು ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು ಕೂಡಲೇ ಈ ಮಕ್ಕಳಿಗೆ ಸರಕಾರದ ವತಿಯಿಂದ ನೀಡಿರುವ ಪರಿಹಾರವನ್ನು ಕೂಡಲೇ ಒದಗಿಸುವಂತೆ ಸೂಚಿಸಿದರು.
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ ಈಗಾಗಲೇ 2,467 ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದ್ದು, ಲಸಿಕೆ ಬಂದ ಕೂಡಲೇ ಅವರಿಗೆ ಕೊಡಿಸಲಾಗುವುದು ಎಂದು ಡಿಡಿಪಿಐ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಸಾರ್ವಜನಿಕರ ಕೆಲಸಕ್ಕೆ ವಿಪರೀತ ಅಡಚಣೆಯುಂಟು ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಈ ರೀತಿ ತೊಂದರೆಯುಂಟು ಮಾಡಿದ್ದಲ್ಲಿ ಸಂಬಂಧಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಅವರು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯೆಗಳನ್ನುಂಟು ಮಾಡಬಾರದು. ಒಂದು ವೇಳೆ ಮಾಡಿದ್ದಲ್ಲಿ ಸಮಸ್ಯೆ ಮಾಡಿದವರ ಶಿಕ್ಷೆಗೆ ಶಿಫಾರಸು ಮಾಡುವುದು ತಮ್ಮ ಕೆಲಸವಾಗಿದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಿಇಒ ಡಾ. ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.