ಸ್ಟ್ಯಾಟಿನ್ ಔಷಧದ ಬಳಕೆಯಿಂದ ಕೊರೋನ ಸೋಂಕಿನ ಸಾವಿನ ಪ್ರಮಾಣ ಇಳಿಕೆ: ಅಧ್ಯಯನ ವರದಿ
ಸ್ಟಾಕ್‌ಹೋಮ್, ನ.15: ದೇಹದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಬಳಸುವ ಸ್ಟ್ಯಾಟಿನ್ ಔಷಧವು ಕೊರೋನ ಸೋಂಕಿಗೆ ಸಂಬಂಧಿಸಿದ ಸಾವಿನ ಅಪಾಯದ ಪ್ರಮಾಣವನ್ನು ತುಸು ಕಡಿಮೆಗೊಳಿಸಬಹುದು ಎಂದು ಸ್ವೀಡನ್‌ನಲ್ಲಿ ನಡೆಸಿದ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ತದಲ್ಲಿ ಲಿಪೊಪ್ರೊಟೀನ್(ಸರಳ ಪ್ರೊಟೀನ್) ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆಗೊಳಿಸಿ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಸಾಮಾನ್ಯವಾಗಿ ಸ್ಟ್ಯಾಟಿನ್ ಔಷಧ ಬಳಸಲಾಗುತ್ತದೆ. ಈ ಔಷಧವು ಕೊರೋನ ಸೋಂಕಿನಿಂದ ಆಗುವ ಸಾವಿನ ಅಪಾಯದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆಯೇ ಎಂಬ ಬಗ್ಗೆ ಸ್ವೀಡನ್ ನ ಕ್ಯಾರೊಲಿಂಸ್ಕಾ ಸಂಸ್ಥೆ ಅಧ್ಯಯನ ನಡೆಸಿತ್ತು.
ಇತ್ತೀಚೆಗೆ ‘ಪಿಎಲ್ಒಎಸ್ ಮೆಡಿಸಿನ್’ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸ್ಟಾಟಿನ್ ಚಿಕಿತ್ಸೆ ಕೊರೋನ ಸೋಂಕಿನಿಂದ ಉಂಟಾಗುವ ಮರಣದ ಅಪಾಯವನ್ನು ಕಡಿಮೆಗೊಳಿಸುತ್ತದೆ. 2020ರ ಮಾರ್ಚ್ ಮತ್ತು ನವೆಂಬರ್ ನಡುವೆ ಸ್ಟಾಕ್‌ಹೋಮ್ ನ 9,63,876 ನಿವಾಸಿಗಳನ್ನು(45 ವರ್ಷ ಮೀರಿದವರು) ಅಧ್ಯಯನ ಸಮೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯರು ಸೂಚಿಸಿದ ಔಷಧ, ಆರೋಗ್ಯದ ಪರಿಸ್ಥಿತಿ ಮತ್ತು ಸಾವಿಗೆ ಕಾರಣ- ಈ ಮೂರು ಅಂಶಗಳ ಆಧಾರದಲ್ಲಿ ಅಧ್ಯಯನ ನಡೆಸಲಾಗಿದೆ.