ಆಸ್ಟ್ರೇಲಿಯಾ: ಭಾರತ ಸರಕಾರ ಕೊಡುಗೆ ನೀಡಿದ್ದ ಗಾಂಧೀಜಿ ಪ್ರತಿಮೆ ಧ್ವಂಸ

Update: 2021-11-15 17:46 GMT
photo:twitter/@TheQuint

ಮೆಲ್ಬೋರ್ನ್, ನ.15: ಭಾರತ ಸರಕಾರ ಆಸ್ಟ್ರೇಲಿಯಾಕ್ಕೆ ಕೊಡುಗೆ ನೀಡಿದ್ದ ಮಹಾತ್ಮಾ ಗಾಂಧೀಜಿಯವರ ಆಳೆತ್ತರದ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು ಇದೊಂದು ನಾಚಿಕೆಗೇಡಿನ ಕೃತ್ಯವಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಖಂಡಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ರೊವಿಲ್ಲೆ ನಗರದ ಆಸ್ಟ್ರೇಲಿಯನ್ ಭಾರತ ಸಮುದಾಯ ಕೇಂದ್ರದಲ್ಲಿ ಶುಕ್ರವಾರ ಈ ಪ್ರತಿಮೆಯನ್ನು ಪ್ರಧಾನಿ ಸ್ಕಾಟ್ ಮಾರಿಸನ್ ಅನಾವರಣಗೊಳಿಸಿದ್ದರು. ಶುಕ್ರವಾರ ಸಂಜೆ 5:30ರಿಂದ ಶನಿವಾರ ಸಂಜೆ 5:30ರ ನಡುವೆ ಅಪರಿಚಿತ ದುಷ್ಕರ್ಮಿಗಳು ವಿದ್ಯುತ್ ಉಪಕರಣದ ತಂತ್ರಜ್ಞಾನ ಬಳಸಿ ಈ ಪ್ರತಿಮೆಯನ್ನು ತುಂಡರಿಸಿದ್ದಾರೆ ಎಂದು ವಿಕ್ಟೋರಿಯಾ ಪೊಲೀಸರು ಹೇಳಿದ್ದಾರೆ. 

ಈ ಹಂತದ ಅವಮರ್ಯಾದೆಯಾಗಿರುವುದರಿಂದ ಅತ್ಯಂತ ನಿರಾಸೆಯಾಗಿದೆ. ವಿಶ್ವದ ಅತ್ಯಂತ ಯಶಸ್ವಿ ಬಹುಸಂಸ್ಕತಿಯ ಮತ್ತು ವಲಸಿಗ ಸ್ನೇಹೀ ದೇಶವಾದ ಆಸ್ಟ್ರೇಲಿಯಾದಲ್ಲಿ ಸಾಂಸ್ಕತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಖಂಡಿತಾ ಸಹಿಸಲಾಗದು. ಈ ಕೃತ್ಯ ನಡೆಸಿದವರು ಆಸ್ಟ್ರೇಲಿಯನ್ ಭಾರತೀಯ ಸಮುದಾಯಕ್ಕೆ ಅತ್ಯಂತ ಅಗೌರವ ತೋರಿದ್ದು ತಮ್ಮ ಕೃತ್ಯದ ಬಗ್ಗೆ ಅವರು ನಾಚಿಕೆಪಡಬೇಕು’ ಎಂದು ಪ್ರಧಾನಿ ಸ್ಕಾಟ್ ಮಾರಿಸನ್ ಖಂಡಿಸಿದ್ದಾರೆ. ನಾಕ್ಸ್‌ಕ್ರೈಮ್ ತನಿಖಾ ಸಂಸ್ಥೆಯ ಪತ್ತೇದಾರ ತಂಡ ತನಿಖೆ ನಡೆಸುತ್ತಿದೆ. ಯಾರಲ್ಲಾದರೂ ಮಾಹಿತಿ ಇದ್ದರೆ ಪೊಲೀಸರೊಂದಿಗೆ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದೊಂದು ಅತ್ಯಂತ ಹೀನ ಕೃತ್ಯ ಎಂದು ನಗರದಲ್ಲಿನ ಭಾರತೀಯ ಸಮುದಾಯ ತೀವ್ರ ಆಘಾತ ವ್ಯಕ್ತಪಡಿಸಿದೆ. ‘ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ವಿಕ್ಟೋರಿಯಾ’ದ ಅಧ್ಯಕ್ಷ ಸೂರ್ಯಪ್ರಕಾಶ್ ಸೋನಿ ಮತ್ತು ‘ಆಸ್ಟ್ರೇಲಿಯಾ ಇಂಡಿಯಾ ಕಮ್ಯುನಿಟಿ ಚಾರಿಟೇಬಲ್ ಟ್ರಸ್ಟ್’ನ ಅಧ್ಯಕ್ಷ ವಾಸನ್ ಶ್ರೀನಿವಾಸನ್ ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ದಿನವಿಡೀ ಮಳೆ ಸುರಿಯುತ್ತಿದ್ದರಿಂದ ಅಪರಾಧಿಗಳ ಬೆರಳಚ್ಚು ಸಿಗುವ ಸಾಧ್ಯತೆ ಕಡಿಮೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News