ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಈ ವರ್ಷಾಂತ್ಯಕ್ಕೆ ಭಾರತಕ್ಕೆ ಪೂರೈಕೆ: ರಶ್ಯಾ

Update: 2021-11-15 17:53 GMT

ಮಾಸ್ಕೋ, ನ.15: ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400ರ ಮೊದಲ ಘಟಕವನ್ನು ಈ ವರ್ಷಾಂತ್ಯಕ್ಕೆ ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದು ರಶ್ಯದ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಭಾರತದ ಕೋರಿಕೆಯಂತೆ ನಿಗದಿತ ಅವಧಿಗೂ ಮುನ್ನವೇ ಎಸ್-400 ಪೂರೈಕೆ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಪ್ರಥಮ ಘಟಕವು 2021ರ ಅಂತ್ಯದೊಳಗೆ ಭಾರತ ತಲುಪಲಿದೆ ಎಂದು ಸರಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ರಫ್ತು ಸಂಸ್ಥೆ ರೊಸೊಬೊರೊನ್‌ಎಕ್ಸ್‌ಪೋರ್ಟ್‌ನ ಪ್ರಧಾನ ನಿರ್ದೇಶಕ ಅಲೆಕ್ಸಾಂಡರ್ ಮಿಖೀವ್‌ರನ್ನು ಉಲ್ಲೇಖಿಸಿ ರಶ್ಯಾದ ಸುದ್ಧಿಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿರ್ವಹಿಸುವ ಬಗ್ಗೆ ಭಾರತದ ತಜ್ಞರು ರಶ್ಯಾದಲ್ಲಿ ತರಬೇತಿ ಪೂರ್ಣಗೊಳಿಸಿ ಮರಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಮ್ಮ ತಜ್ಞರು ಭಾರತಕ್ಕೆ ತೆರಳಿ ಘಟಕವನ್ನು ನಿಗದಿತ ಸ್ಥಳದಲ್ಲಿ ನೆಲೆಗೊಳಿಸಲು ನೆರವಾಗಲಿದ್ದಾರೆ ಎಂದವರು ಹೇಳಿದ್ದಾರೆ.

ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯ ಮೊದಲ ಕಂತಿನ ಭಾಗಗಳು ಈಗಾಗಲೇ ಭಾರತವನ್ನು ತಲುಪಿದ್ದು ಇವುಗಳ ಜೋಡಣೆ ಪೂರ್ಣಗೊಂಡ ಬಳಿಕ ಮೊದಲು ಪಶ್ಚಿಮದ ಗಡಿಭಾಗದಲ್ಲಿ ಇವನ್ನು ನಿಯೋಜಿಸಲಾಗುವುದು. ಇದರಿಂದ ಪಶ್ಚಿಮ ಹಾಗೂ ಉತ್ತರದ ಗಡಿಭಾಗದಲ್ಲಿ ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುವ ಬೆದರಿಕೆಯನ್ನು ನಿರ್ವಹಿಸಬಹುದಾಗಿದೆ ಎಂದು ಭಾರತದ ರಕ್ಷಣಾ ಉದ್ಯಮದ ಮೂಲಗಳು ಹೇಳಿವೆ. ಒಟ್ಟು 35,000 ಕೋಟಿ ರೂ. ಮೊತ್ತದಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಯ 5 ಘಟಕಗಳ ಪೂರೈಕೆಗೆ ರಶ್ಯಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು , ಇವುಗಳು ಸುಮಾರು 400 ಕಿ.ಮೀ ದೂರದಿಂದ ಶತ್ರುರಾಷ್ಟ್ರದ ಯುದ್ಧವಿಮಾನ ಅಥವಾ ಕ್ಷಿಪಣಿಯನ್ನು ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News