×
Ad

ಸುರತ್ಕಲ್: ಮತ್ತೆ ಅನೈತಿಕ ‌ಪೊಲೀಸ್‌ಗಿರಿ; ಸಂಘಪರಿವಾರದ 6 ಮಂದಿ ಕಾರ್ಯಕರ್ತರ ಬಂಧನ

Update: 2021-11-16 09:12 IST

ಮಂಗಳೂರು, ನ.16: ನಗರ ಹೊರವಲಯದ ಸುರತ್ಕಲ್ ಬಳಿ ಸೋಮವಾರ ರಾತ್ರಿ ಮತ್ತೊಂದು ಅನೈತಿಕ ಪೊಲೀಸ್‌ಗಿರಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ಸುರತ್ಕಲ್ -ಮುಕ್ಕ ಪರಿಸರದ ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್, ಪ್ರತೀಶ್ ಆಚಾರ್ಯ, ಭರತ್ ಶೆಟ್ಟಿ, ಸುಕೇಶ್ ಎಂದು ಗುರುತಿಸಲಾಗಿದೆ.

ಸುರತ್ಕಲ್ ಮುಕ್ಕದ ಮುಹಮ್ಮದ್ ಯಾಸೀನ್ (20) ಮುಕ್ಕ ಶ್ರೀನಿವಾಸ್ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಯಾಗಿದ್ದು, ಇದೇ ಕಾಲೇಜಿನ ವಿದ್ಯಾರ್ಥಿನಿಯ ವಿನಂತಿ ಮೇರೆಗೆ ಮುಹಮ್ಮದ್ ಯಾಸೀನ್ ತನ್ನ ಬೈಕ್‌ನಲ್ಲಿ ಸೋಮವಾರ ರಾತ್ರಿ 10 ಗಂಟೆಗೆ ಸುರತ್ಕಲ್ ಸಮೀಪದ ಕಲ್ಯಾಣಿ ಸಿಟಿ ಪರ್ಲ್ ಅಪಾರ್ಟ್‌ಮೆಂಟ್‌ಗೆ ಡ್ರಾಪ್ ಕೊಡಲು ಹೊರಟಿದ್ದರು. ಈ ಸಂದರ್ಭ ಈ ಇಬ್ಬರು ವಿದ್ಯಾರ್ಥಿಗಳನ್ನು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಸಂಘ ಪರಿವಾರದ ಆರು ಮಂದಿ ಕಾರ್ಯಕರ್ತರು ಅಪಾರ್ಟ್‌ಮೆಂಟ್ ಸಮೀಪ ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ವಿದ್ಯಾರ್ಥಿನಿಯನ್ನು ಉದ್ದೇಶಿಸಿ "ನಿನಗೆ ಮುಸ್ಲಿಂ ಜೊತೆಗೆ ಹೋಗಬೇಕಾ ? ಹಿಂದೂಗಳು ಸಿಗುವುದಿಲ್ಲವಾ ?" ಎಂದು ಕೇಳಿ ಕೈಯಿಂದ ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯ ಮೈಮೇಲೆ ಕೈ ಹಾಕಿ ದೂಡಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಸುರತ್ಕಲ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿ ದುಷ್ಕರ್ಮಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News