ಮಾಂಸಾಹಾರಿಗಳೊಂದಿಗೆ ಬಿಜೆಪಿ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ:ಗುಜರಾತ್ ಮುಖ್ಯಮಂತ್ರಿ ಪಟೇಲ್

Update: 2021-11-16 05:39 GMT
Photo: Facebook@ Bhupendra Pate

ಆನಂದ್: ಹಲವು ನಗರಗಳಲ್ಲಿನ ರಸ್ತೆಗಳಿಂದ ಮಾಂಸಾಹಾರಿ ಆಹಾರದ ಗಾಡಿಗಳನ್ನು ತೆಗೆದುಹಾಕಬೇಕು ಎಂಬ ಬೇಡಿಕೆಯ ನಡುವೆಯೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಜನರ ವಿಭಿನ್ನ ಆಹಾರ ಪದ್ಧತಿಗಳೊಂದಿಗೆ ರಾಜ್ಯ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಆದಾಗ್ಯೂ, ಸ್ವಚ್ಚತೆ ಇಲ್ಲದೇ ಆಹಾರವನ್ನು ಮಾರಾಟ ಮಾಡುವ ಅಥವಾ ನಗರದ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಬೀದಿಬದಿ ಆಹಾರದ ಗಾಡಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಪಟೇಲ್ ಹೇಳಿದರು.

“ಕೆಲವರು ಸಸ್ಯಾಹಾರ ತಿನ್ನುತ್ತಾರೆ. ಕೆಲವರು ಮಾಂಸಾಹಾರ ತಿನ್ನುತ್ತಾರೆ. ಇದರಿಂದ ಬಿಜೆಪಿ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ರಸ್ತೆಯಿಂದ ನಿರ್ದಿಷ್ಟ 'ಲಾರಿ'ಗಳನ್ನು (ಗಾಡಿಗಳನ್ನು) ತೆಗೆದುಹಾಕಲು ಬೇಡಿಕೆಗಳಿವೆ. ನಮ್ಮ ಕಳವಳ ಏನೆಂದರೆ ಆಹಾರದ ಗಾಡಿಗಳಿಂದ ಮಾರಾಟವಾಗುವ ಆಹಾರವು ಅನೈರ್ಮಲ್ಯವಾಗಿರಬಾರದು" ಎಂದು ಆನಂದ್ ಜಿಲ್ಲೆಯ ಬಂಧನಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕ್ರಮವನ್ನು ಉದ್ದೇಶಿಸಿ  ಪಟೇಲ್ ಹೇಳಿದರು.

ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದರೆ ಆಹಾರ ಗಾಡಿಗಳನ್ನು ತೆಗೆದುಹಾಕುವ ಬಗ್ಗೆ ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್‌ಗಳು ಅಥವಾ ಪುರಸಭೆಗಳು ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.

ಗುಜರಾತ್‌ನ ವಿವಿಧ ನಗರಗಳಲ್ಲಿ ಮಾಂಸಾಹಾರಿ ಆಹಾರದ ಗಾಡಿಗಳನ್ನು ರಸ್ತೆಗಳಿಂದ ತೆಗೆದುಹಾಕುವಂತೆ ಸ್ಥಳೀಯ ಬಿಜೆಪಿ ನಾಯಕರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಸ್ಪಷ್ಟೀಕರಣ ಬಂದಿದೆ.

ಅಹಮದಾಬಾದ್‌ನಲ್ಲಿ ಬಿಜೆಪಿ ಆಡಳಿತದಲ್ಲಿರುವ ಮುನ್ಸಿಪಲ್ ಕಾರ್ಪೊರೇಷನ್ ಸಾರ್ವಜನಿಕ ರಸ್ತೆಗಳಿಂದ ಮಾಂಸಾಹಾರಿ ಆಹಾರ ಮಳಿಗೆಗಳನ್ನು ತೆಗೆದುಹಾಕಲು ಮತ್ತು ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳಿಂದ 100 ಮೀಟರ್ ದೂರದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಲು ನಿರ್ಧರಿಸಿದೆ.

ವಡೋದರಾ, ರಾಜ್‌ಕೋಟ್ ಹಾಗೂ  ದ್ವಾರಕಾದಂತಹ ನಗರ ಗಳಿಂದಲೂ ಮಾಂಸಾಹಾರಿ ಆಹಾರದ ಗಾಡಿಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲು ಬೇಡಿಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News