×
Ad

ಸುರತ್ಕಲ್ ನಲ್ಲಿ ಅನೈತಿಕ ಪೊಲೀಸ್‌ ಗಿರಿ ಪ್ರಕರಣ : ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದೇನು ?

Update: 2021-11-16 14:29 IST

ಮಂಗಳೂರು, ನ. 16: ನಗರದ ಹೊರ ವಲಯದ ಸುರತ್ಕಲ್ ಬಳಿ ಸೋಮವಾರ ರಾತ್ರಿ ನಡೆದ ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿ ಆರು ಮಂದಿ ಬಂಧಿತರು ತಾವು ಹಿಂದುತ್ವ ಸಂಘಟನೆಗಳಿಗೆ ಸೇರಿದ್ದು, ಅದರ ಸದಸ್ಯರೆಂದು ಹೇಳಿಕೊಂಡಿದ್ದಾರೆ. ಮಾಹಿತಿಯನ್ನು ಸಂಬಂಧಪಟ್ಟ ಸಂಘಟನೆಗಳ ಮೂಲಕ ಪರಿಶೀಲನೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿಸಲ್ಪಟ್ಟ ಆರು ಮಂದಿ ಆರೋಪಿಗಳಲ್ಲಿ ಇಬ್ಬರು ಘಟನೆಯ ಸಂದರ್ಭ ಸ್ವಿಗ್ಗಿ ಫುಡ್ ಡೆಲಿವರಿ ಸಂಸ್ಥೆಯ ಟಿ ಶರ್ಟ್ ಧರಿಸಿದ್ದು, ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಯುವಕ ಯುವತಿ ಜತೆಯಾಗಿ ಹೋಗುತ್ತಿದ್ದವರನ್ನು ಇಬ್ಬರು ಆರಂಭದಲ್ಲಿ ಫಾಲೋ ಮಾಡಿದವರು ಸ್ವಿಗ್ವಿ ಫುಡ್ ವಿತರಣಾ ಸಂಸ್ಥೆಯ ಟೀ ಶರ್ಟ್ ಧರಿಸಿರುವುದು ತಿಳಿದು ಬಂದಿದೆ. ಅವರು ಡೆಲಿವರಿ ಬಾಯ್ ಗಳಾಗಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದರೋ ಅಥವಾ ಟಿ ಶರ್ಟ್ ದುರ್ಬಳಕೆ ಮಾಡಿದ್ದಾರೆಯೋ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಉತ್ತರಿಸಿದ್ದಾರೆ.

ಸುರತ್ಕಲ್‌ನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ತಾನು ಆ ಹಿಂದೆ ವಾಸ ಮಾಡುತ್ತಿದ್ದ ರೂಂ ಬದಲಾಯಿಸಿ ಸುರತ್ಕಲ್ ವ್ಯಾಪ್ತಿಯಲ್ಲಿ ತನ್ನ ಸ್ನೇಹಿತರ ರೂಂಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು. ಶಿಫ್ಟ್ ಮಾಡುವಾಗ ತಡವಾಗಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ತಮ್ಮ ಹಿರಿಯ ವಿದ್ಯಾರ್ಥಿಯೊಬ್ಬರನ್ನು ಕರೆಸಿಕೊಂಡು ಅವರಿಂದ ಡ್ರಾಪ್ ಪಡೆಯುವ ಸಂದರ್ಭ ಅವರನ್ನು ಅನುಸರಿಸಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆಕೆ ತಾನು ಹೋಗಬೇಕಾಗಿದ್ದ ಕಡೆ ತಲುಪಿದಾಗ ಆಕೆಯ ಜತೆಗಿದ್ದ ವ್ಯಕ್ತಿಗೆ ಎಳೆದಾಡಿ ಹಲ್ಲೆ ನಡೆಸಿದ್ದಾರೆ.

ಯುವತಿ ಹಾಗೂ ಆಕೆಯ ಪೋಷಕರ ಬಗ್ಗೆ ತೀರಾ ಅವಾಚ್ಯವಾಗಿ, ಹಗುರವಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಅಲ್ಲಿ ಅನ್ಯಧರ್ಮೀಯರೆಂಬ ಕಾರಣಕ್ಕೆ ಜಗಳವಾಗಿದೆ ಎಂಬ ಕಾರಣಕ್ಕೆ ಎರಡು ಸೆಕ್ಷನ್‌ ನಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಎಸಿಪಿ (ಉತ್ತರ) ನೇತೃತ್ವದ ಸುರತ್ಕಲ್ ಪೊಲೀಸರ ತಂಡದಿಂದ ಬಂಧಿಸಲಾಗಿದೆ. ಇಬ್ಬರು ಆರಂಭದಿಂದ ಸಂತ್ರಸ್ತರನ್ನು ಫಾಲೋ ಮಾಡಿಕೊಂಡು ಬಂದವರು ಮತ್ತೆ ನಾಲ್ವರನ್ನು ಫೋನ್ ಮೂಲಕ ಸಂಪರ್ಕಿಸಿ ಘಟನಾ ಸ್ಥಳಕ್ಕೆ ಬರಮಾಡಿಸಿಕೊಂಡವರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News