ಮಹಾರಾಷ್ಟ್ರ:ಸುಮಾರು 5,000 ಮಹಿಳೆಯರ ಹೆರಿಗೆ ಮಾಡಿಸಿದ್ದ ದಾದಿ ತಮ್ಮ ಹೆರಿಗೆಯ ವೇಳೆ ಮೃತ್ಯು

Update: 2021-11-16 09:22 GMT
ಸಾಂದರ್ಭಿಕ ಚಿತ್ರ, Photo: The tribune

ಮುಂಬೈ: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ 38 ವರ್ಷದ ದಾದಿಯೊಬ್ಬರು ಸುಮಾರು 5,000 ಮಹಿಳೆಯರ  ಹೆರಿಗೆ ಮಾಡಿಸಿದ್ದರು. ಆದರೆ ಅವರು ತಮ್ಮ ಹೆರಿಗೆಯ ವೇಳೆ ಕಾಣಿಸಿಕೊಂಡ  ಆರೋಗ್ಯ ಸಮಸ್ಯೆಯ  ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ನವೆಂಬರ್ 2 ರಂದು ಹಿಂಗೋಲಿ ಸರಕಾರಿ ಆಸ್ಪತ್ರೆಯಲ್ಲಿ ಜ್ಯೋತಿ ಗಾವ್ಲಿ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ ಹಾಗೂ  ನ್ಯುಮೋನಿಯಾ ಹಾಗೂ  ಇತರ ತೊಂದರೆಗಳಿಂದಾಗಿ ನೆರೆಯ ನಾಂದೇಡ್‌ನ ಆಸ್ಪತ್ರೆಯಲ್ಲಿ  ರವಿವಾರ ನಿಧನರಾದರು ಎಂದು ಅವರು ಹೇಳಿದರು.

"ತಮ್ಮ ಕೆಲಸದ ಭಾಗವಾಗಿ, ಅವರು ಹಿಂಗೋಲಿ ಸಿವಿಲ್ ಆಸ್ಪತ್ರೆಯ ಲೇಬರ್ ರೂಮ್‌ನಲ್ಲಿ ನಿಯೋಜಿಸಲ್ಪಟ್ಟರು. ಅವರು ತಮ್ಮ ಹೆರಿಗೆಯ ಕೊನೆಯ ದಿನದವರೆಗೆ ಕೆಲಸ ಮಾಡಿದ್ದರು . ನಂತರ ಹೆರಿಗೆಗೆ ತೆರಳಿದ್ದರು"  ಎಂದು ಹಿಂಗೋಲಿ ಸಿವಿಲ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ ಗೋಪಾಲ್ ಕದಂ ತಿಳಿಸಿದ್ದಾರೆ.

ಗಾವ್ಲಿ ಕಳೆದ ಎರಡು ವರ್ಷಗಳಿಂದ ಸಿವಿಲ್ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದರು ಹಾಗೂ  ಅವರು ಈ ಹಿಂದೆ ಎರಡು ಇತರ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ನವೆಂಬರ್ 2 ರಂದು ಅವರು ಸಿವಿಲ್ ಆಸ್ಪತ್ರೆಯಲ್ಲಿ ಹೆರಿಗೆಗೆ ಒಳಗಾದರು. ಅದೇ ದಿನ, ಸಮಸ್ಯೆ ಕಾಣಿಸಿಕೊಂಡ ಕಾರಣ ನಾಂದೇಡ್‌ನಲ್ಲಿರುವ ಸರಕಾರಿ ಆಸ್ಪತ್ರೆಗೆ ಅವರನ್ನು ಕಳುಹಿಸಲಾಯಿತು ಎಂದು ಅಧಿಕಾರಿ ಹೇಳಿದರು.

ಗಾವ್ಲಿ ಅವರಿಗೆ  ನಂತರ ನ್ಯೂಮೋನಿಯ ಕಾಣಿಸಿಕೊಂಡಿದ್ದು ಅವರನ್ನು ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇಡಬೇಕಾಗಿದ್ದರಿಂದ  ನಾಂದೇಡ್‌ನಲ್ಲಿರುವ ಸರಕಾರಿ  ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

"ಅವರು ರವಿವಾರ ನಿಧನರಾದರು. ನಾವು ಸಾಮಾನ್ಯವಾಗಿ ನಮ್ಮ ಆಸ್ಪತ್ರೆಯಲ್ಲಿ ಒಂದು ದಿನದಲ್ಲಿ 15 ಹೆರಿಗೆಗಳನ್ನು ನಡೆಸುತ್ತೇವೆ. ಸುಮಾರು ಐದು ವರ್ಷಗಳ ಸೇವಾ ಅವಧಿಯಲ್ಲಿ ಅವರು ಸುಮಾರು 5,000 ಹೆರಿಗೆಗಳಲ್ಲಿ ಸಹಾಯ ಮಾಡಿರಬೇಕು" ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News