×
Ad

ಕೋಡಿಕಲ್ ನಾಗಬನ ಹಾನಿ ಪ್ರಕರಣ ಸಹಿಸಲಾಗದು: ಕಮಿಷನರ್ ಶಶಿಕುಮಾರ್‌

Update: 2021-11-16 15:56 IST

ಮಂಗಳೂರು, ನ.16: ಕೋಡಿಕಲ್ ನಾಗಬನದಲ್ಲಿ ದುಷ್ಕರ್ಮಿಗಳು ನಾಗದೇವರ ಕಲ್ಲು ಎಸೆದು ಹಾನಿ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಂತಹ ಘಟನೆಗಳು ಅಸ್ವೀಕಾರಾರ್ಹ. ಇಂತಹ ವಿಕೃತಿಯಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಲು ಸಮರ್ಥ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಕಚೇರಿಯಲ್ಲಿಂದು ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ ಅವರು, ತುಳುನಾಡಿನಲ್ಲಿ ಧಾರ್ಮಿಕ ಕ್ಷೇತ್ರಗಳಾದ ನಾಗನ ಕಲ್ಲು, ದೈವಸ್ಥಾನಗಳಲ್ಲಿ ಬಹಳ ಶ್ರದ್ಧೆ ಮತ್ತು ಭಕ್ತಿಯಿಂದ ಜನ ಆರಾಧಿಸುತ್ತಿದ್ದಾರೆ. ಈ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಪ್ರಕರಣಗಳು ನಡೆದಿವೆ. ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದಿದ್ದ ಪ್ರಕರಣಗಳಲ್ಲೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲೂ ದುಷ್ಕರ್ಮಿಗಳ ಪತ್ತೆಗೆ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಕೋಡಿಕಲ್‌ನಲ್ಲಿ ಪ್ರತಿಷ್ಠಾಪನೆ ಮಾಡಲಾದ ನಾಗನಕಲ್ಲನ್ನು ತೆಗೆದು ಬನದಲ್ಲಿ ಎಸೆದಿರುವ ಕೃತ್ಯ ನಡೆದಿದೆ. ಸ್ಥಳೀಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮನವಿಯನ್ನು ನಾನು ಪಡೆದಿದ್ದೇನೆ. ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಇಂತಹ ಅಹಿತಕರ ಘಟನೆಗಳ ಸಂದರ್ಭ ಸ್ಥಳೀಯರು ಜಾತಿ ಧರ್ಮ ಮರೆತು ಶ್ರದ್ಧಾಪೂರ್ವಕವಾಗಿ ನಡೆಯುವ ಸಂಸ್ಕೃತಿ ಕರಾವಳಿ ಭಾಗದಲ್ಲಿದೆ. ಹಾಗಾಗಿ ಈ ಘಟನೆಯಿಂದ ಅಲ್ಲಿನ ಎಲ್ಲಾ ಜನರ ಭಾವನೆಗಳಿಗೆ ಧಕ್ಕೆ ಆಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣಗಳಲ್ಲಿ ಯಾವುದೇ ರೀತಿಯ ಸಿಸಿ ಕ್ಯಾಮರವಾಗಲಿ, ಭದ್ರತಾ ವ್ಯವಸ್ಥೆಯೂ ಇಲ್ಲ. ಹಾಗಾಗಿ ಹಂತ ಹಂತವಾಗಿ ಈ ರೀತಿಯ ಚಟುವಟಿಕೆಯಲ್ಲಿ ಈ ಹಿಂದೆ ತೊಡಗಿಕೊಂಡವರನ್ನು ಪ್ರತಿಯೊಬ್ಬರನ್ನು ವಿಚಾರಣೆಗೊಳಪಡಿಸುವುದು, ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರು ಸಂಯಮ ಕಳೆದುಕೊಳ್ಳದೆ, ತಮ್ಮಲ್ಲಿ ಯಾವುದೇ ರೀತಿಯ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ನೀಡುವ ಮೂಲಕ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News