6 ಬಿ.ಡಾಲರ್‌ ಜಗತ್ತಿನ ಹಸಿವು ಸಮಸ್ಯೆ ನೀಗಿಸಬಹುದೇ? ಎಂದು ಸವಾಲೆಸೆದಿದ್ದ ಇಲಾನ್‌ ಮಸ್ಕ್‌ ಗೆ ವಿಶ್ವಸಂಸ್ಥೆ ಉತ್ತರ

Update: 2021-11-16 10:59 GMT

ನ್ಯೂಯಾರ್ಕ್: ತಮ್ಮ 6 ಬಿಲಿಯನ್ ಡಾಲರ್ ಸಂಪತ್ತು ಜಗತ್ತಿನ ಹಸಿವಿನ ಸಮಸ್ಯೆಯನ್ನು ಹೇಗೆ ನೀಗಿಸಬಹುದೆಂದು ತೋರಿಸಿ ಎಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಂಸ್ಥೆಯ ಮುಖ್ಯಸ್ಥ  ಇಲಾನ್ ಮಸ್ಕ್ ಅವರು ಇತ್ತೀಚೆಗೆ ವಿಶ್ವ ಸಂಸ್ಥೆಗೆ ಸವಾಲೆಸೆದಿದ್ದರು. ಸೋಮವಾರ ಈ ಪ್ರಶ್ನೆಗೆ ಉತ್ತರವನ್ನು ವಿಶ್ವ ಸಂಸ್ಥೆ ನೀಡಿದೆ.

6.6 ಬಿಲಿಯನ್ ಡಾಲರ್ ಹೂಡಿಕೆಗಳು ಜಗತ್ತಿನಾದ್ಯಂತದ 46 ದೇಶಗಳ 42 ಮಿಲಿಯನ್ ಜನರ ಹಸಿವನ್ನು ನೀಗಿಸಬಹುದಾದ  ಯೋಜನೆಯೊಂದನ್ನು ವಿಶ್ವ ಸಂಸ್ಥೆಯ ಆಹಾರ ಸಹಾಯ ಘಟಕ- ವರ್ಲ್ಡ್ ಫುಡ್ ಪ್ರೋಗ್ರಾಂ ಸೋಮವಾರ ವಿವರಿಸಿದೆ. ಈ ಕುರಿತಂತೆ ವರ್ಲ್ಡ್ ಫುಡ್ ಪ್ರೋಗ್ರಾಂನ ಮುಖ್ಯಸ್ಥ ಡೇವಿಡ್ ಬೀಸ್ಲಿ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.

"ಈ ಹಸಿವಿನ ಸಮಸ್ಯೆ ಒಂದು ತುರ್ತು ಮತ್ತು ಅಭೂತಪೂರ್ವ ಸಮಸ್ಯೆಯಾಗಿದೆ ಹಾಗೂ ಅದನ್ನು ನಿವಾರಿಸಬಹುದು.@ಇಲಾನ್‍ ಮಸ್ಕ್ ನೀವು ಒಂದು ಸ್ಪಷ್ಟ ಯೋಜನೆಗಾಗಿ ಕೇಳಿದ್ದೀರಿ. ಅದು ಇಲ್ಲಿದೆ. ನಾವು ನಿಮ್ಮೊಂದಿಗೆ ಮಾತನಾಡಲು ಸಿದ್ಧ- ಹಾಗೂ  ಜೀವಗಳನ್ನು ಉಳಿಸುವ ಕುರಿತು ಗಂಭೀರವಾಗಿ ಚಿಂತಿಸುವ ಇತರರೊಂದಿಗೂ ಮಾತುಕತೆಗೆ ಸಿದ್ಧ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಳೆದ ತಿಂಗಳಾಂತ್ಯಕ್ಕೆ  ಇಲಾನ್ ಮಸ್ಕ್ ಹೇಳಿಕೆ ನೀಡಿ ತಮ್ಮ 6 ಬಿಲಿಯನ್ ಡಾಲರ್  ಜಗತ್ತಿನ ಹಸಿವನ್ನು ಹೇಗೆ ನೀಗಿಸಬಹುದೆಂದು ವರ್ಲ್ಡ್ ಫುಡ್ ಪ್ರೋಗ್ರಾಂ ಹೇಳಿದರೆ ತಾವು ಇದೀಗಲೇ ಟೆಸ್ಲಾ ಸ್ಟಾಕ್ ಮಾರುವುದಾಗಿ ಹೇಳಿದ್ದರು.

ಬೀಸ್ಲಿ ಅವರು ಸಿಎನ್‍ಎನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಸ್ಕ್ ಮತ್ತು ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ ಅವರಂತಹ ಬಿಲಿಯಾಧಿಪತಿಗಳು 6 ಬಿಲಿಯನ್ ಡಾಲರ್, ಅಂದರೆ ಅವರ ಅಪಾರ ಸಂಪತ್ತಿನ ಒಂದು ಸಣ್ಣ ಭಾಗ ನೀಡಿದರೆ, ಮಿಲಿಯಗಟ್ಟಲೆ ಜನರ ಹಸಿವನ್ನು ನೀಗಿಸಬಹುದು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News