ಬಿಹಾರ ಪತ್ರಕರ್ತ, ಆರ್ಟಿಐ ಕಾರ್ಯಕರ್ತನ ಹತ್ಯೆ ಖಂಡಿಸಿ ಸ್ವತಂತ್ರ ತನಿಖೆಗೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್‌ ಆಗ್ರಹ

Update: 2021-11-16 11:05 GMT
Photo: Facebook/Avinash Jha

ಪಾಟ್ನಾ:  ಬಿಹಾರದ ಫ್ರೀಲಾನ್ಸ್ ಪತ್ರಕರ್ತ ಮತ್ತು ಆರ್‍ಟಿಐ ಕಾರ್ಯಕರ್ತ ಬುದ್ಧಿನಾಥ್ ಝಾ ಅವರ ಹತ್ಯೆಯಿಂದ ಆಘಾತವಾಗಿದೆ ಎಂದು ಹೇಳಿರುವ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆ, ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದೆ.

ಅವಿನಾಶ್ ಝಾ ಎಂದೂ ಕರೆಯಲ್ಪಡುವ ಬುದ್ಧಿನಾಥ್ ಝಾ ಅವರ ಸುಟ್ಟು ಕರಕಲಾದ ಮೃತದೇಹ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಹೆದ್ದಾರಿ ಬದಿಯಲ್ಲಿ ನವೆಂಬರ್ 12ರಂದು ಪತ್ತೆಯಾಗಿತ್ತು. ಅವರನ್ನು ನಾಲ್ಕು ದಿನಗಳ ಹಿಂದೆ ಅಪಹರಿಸಲಾಗಿತ್ತು ಎಂದು ಅವರ ಕುಟುಂಬ ಆರೋಪಿಸಿದೆ. ತಮ್ಮ ತನಿಖಾತ್ಮಕ ವರದಿಯೊಂದರಲ್ಲಿ ಝಾ ಅವರು ಜಿಲ್ಲೆಯಲ್ಲಿರುವ ನಕಲಿ ಕ್ಲಿನಿಕ್‍ಗಳ ಹೆಸರುಗಳನ್ನು ಬಹಿರಂಗಗೊಳಿಸಿದ ನಂತರ ಕೆಲ ಅಕ್ರಮ ಕ್ಲಿನಿಕ್‍ಗಳು ಬಾಗಿಲು ಮುಚ್ಚಿದ್ದವಲ್ಲದೆ  ಅಧಿಕಾರಿಗಳು ಇನ್ನು ಕೆಲ ಕ್ಲಿನಿಕ್‍ಗಳಿಗೆ ದಂಡ ಕೂಡ ವಿಧಿಸಿದ್ದರು.

ಅವರ ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಘಟನೆಯ ಏಷ್ಯಾ-ಪೆಸಿಫಿಕ್ ಘಟಕದ ಮುಖ್ಯಸ್ಥ ಡೇನಿಯಲ್ ಬಾಸ್ಟರ್ಡ್, ಅವರು ತಾವು ಮಾಡಿದ ಕೆಲಸ ಹಾಗೂ ತಮ್ಮ ವೃತ್ತಿಗೆ ತೋರಿದ ಬದ್ಧತೆಗಾಗಿ ತಮ್ಮ ಜೀವವನ್ನೇ ತೆತ್ತಿದ್ದಾರೆ ಎಂದರಲ್ಲದೆ ಘಟನೆಯ ಸ್ವತಂತ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದಾರೆ.

ತಮ್ಮ ವರದಿಗಳಿಗಾಗಿ ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಪತ್ರಕರ್ತರು ಹತ್ಯೆಗೀಡಾದ ನಾಲ್ಕನೇ ಪ್ರಕರಣ ಇದಾಗಿದೆ ಎಂದು ಹೇಳಿರುವ ಸಂಘಟನೆ, ಪತ್ರಕರ್ತರಾದ ರಮಣ್ ಕಷ್ಯಪ್, ಚೆನ್ನ ಕೇಸವುಲು ಮತ್ತು ಸುಲಭ್ ಶ್ರೀವಾಸ್ತವ ಅವರ ಹತ್ಯೆಗಳನ್ನೂ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News