ಯಾರೂ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬೇಕು: ಸಮುದಾಯ ಪಾಕಶಾಲೆ ನೀತಿ ರಚಿಸಲು ಕೇಂದ್ರಕ್ಕೆ ಕೊನೆ ಅವಕಾಶ ನೀಡಿದ ಸುಪ್ರೀಂ
ಹೊಸದಿಲ್ಲಿ,ನ.16: ದೇಶದಲ್ಲಿ ಹಸಿವಿನ ಸಮಸ್ಯೆಯನ್ನು ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಸುಪ್ರೀಂ ಕೋರ್ಟ್, ಸಾಮುದಾಯಿಕ ಪಾಕಶಾಲೆಗಳ ಕುರಿತು ರಾಷ್ಟ್ರವ್ಯಾಪಿ ನೀತಿಯೊಂದನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಮೂರು ವಾರಗಳ ಅಂತಿಮ ಕಾಲಾವಕಾಶ ನೀಡಿದೆ.
ಯಾರೂ ಕೂಡಾ ಹಸಿವಿನಲ್ಲಿ ಸಾವನ್ನಪ್ಪದಂತೆ ನೋಡಿಕೊಳ್ಳುವುದು ಯಾವುದೇ ಅಭಿವೃದ್ಧಿಶೀಲ ಸರಕಾರದ ಕರ್ತವ್ಯವಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ತಿಳಿಸಿತು.
ಹಸಿವಿನಿಂದ ಜನರು ಸಾವಿಗೀಡಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಾಮುದಾಯಿಕ ಪಾಕಶಾಲೆ ನೀತಿಯನ್ನು ರೂಪಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ಈ ಆದೇಶ ನಿಡಿದೆ. ಈ ಮೊದಲು ಅಕ್ಟೋಬರ್ 27ರಂದು ನಡೆಸಿದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್, ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಇದೇ ಮಾದರಿಯ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ, ಸಾಮುದಾಯಿಕ ಪಾಕಶಾಲೆ ಬಗ್ಗೆ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರಕ್ಕೆ ಬರುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.
ತರುವಾಯ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಹಾಗೂ ಸಾರ್ವಜನಿಕ ಆಡಳಿತದ ಅಧೀನ ಕಾರ್ಯದರ್ಶಿ ಸುಪ್ರೀಂಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿತ್ತು. ಆದರೆ ಅಫಿಡವಿಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠವು, ಅಧೀನ ಕಾರ್ಯದರ್ಶಿ ಬದಲಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು.
ಕೇಂದ್ರ ಸರಕಾರವು ಅಫಿಡವಿಟ್ ನಲ್ಲಿ ರಾಜ್ಯ ಸರಕಾರಗಳು ನಡೆಸುತ್ತಿರುವ ಸಾಮುದಾಯಿಕ ಪಾಕಶಾಲೆಗಳ ಯೋಜನೆಗಳನ್ನು ಪಟ್ಟಿ ಮಾಡಿದೆಯಷ್ಟೆ. ಆದರೆ ಈ ಮಾಹಿತಿಯನ್ನು ಈಗಾಗಲೇ ರಾಜ್ಯ ಸರಕಾರಗಳು ನ್ಯಾಯಾಲಯಕ್ಕೆ ಸಲ್ಲಿಸಿವೆ ಎಂದು ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ ಅಭಿಪ್ರಾಯಿಸಿತು. ಅಲ್ಲದೆ ಈ ಅಫಿಡವಿಟ್ ಅನ್ನು ಅಧೀನ ಕಾರ್ಯದರ್ಶಿಯವರ ಬದಲಿಗೆ ಪ್ರಧಾನ ಕಾರ್ಯದರ್ಶಿ ಸಲ್ಲಿಸಬೇಕಿತ್ತು ಎಂದರು.
ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಸಾಮುದಾಯಿಕ ಪಾಕಶಾಲೆ ನೀತಿಯನ್ನು ರೂಪಿಸುವ ಕುರಿತು ಸೆಪ್ಟೆಂಬರ್ 9ರಂದು ಸಭೆಯನ್ನು ನಡೆಸಲಾಯಿತಾದರೂ, ಅದರಲ್ಲಿ ಯಾವುದೇ ದೃಢವಾದ ನಿರ್ಧಾರವನ್ನು ಕೈಗೊಳ್ಳಲಾಗಲಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿಂದ ಸುಪ್ರೀಂಕೋರ್ಟ್, ಒಂದು ವೇಳೆ ಜನತೆ ಹಸಿವಿನಿಂದ ಸಾಯುವುದನ್ನು ಕೇಂದ್ರ ಸರಕಾರವು ಬಯಸುತ್ತಿದೆಯಾದರೆ, ಯಾವುದೇ ರಾಜ್ಯವು ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲವೆಂದು ಕಟುವಾಗಿ ಹೇಳಿತು. ‘‘ ಇಂತ ಅತಂತ್ರದ ಪರಿಸ್ಥಿತಿಯಲ್ಲಿ ಜನರನ್ನು ಬಿಟ್ಟುಬಿಡಲು ನಾವು ಸಿದ್ಧರಿಲ್ಲ ಹಾಗೂ ಎಲ್ಲವೂ ಸರಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ’’ಎಂದರು.
ಹಾಲಿ ಪ್ರಕರಣದಲ್ಲಿ ತಾನು ಅಪೌಷ್ಟಿಕತೆಯ ಬಗ್ಗೆ ವ್ಯವಹರಿಸುತ್ತಿಲ್ಲ, ಕೇವಲ ಹಸಿವಿನ ಸಮಸ್ಯೆಯ ಬಗ್ಗೆ ಮಾತ್ರವೇ ವಿಚಾರಣೆ ನಡೆಸುತ್ತಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಸಾಮುದಾಯಿಕ ಪಾಕಶಾಲೆಗಳ ಕುರಿತು ವಿವಿಧ ರಾಜ್ಯ ಸರಕಾರಗಳು ರೂಪಿಸಿದ ಯೋಜನೆಗಳ ವಿಶ್ಲೇಷಣೆಯನ್ನು ನಡೆಸಿದ ಬಳಿಕ ತಾವು ರಾಷ್ಟ್ರೀಯ ಸಾಮುದಾಯಿಕ ಪಾಕಶಾಲೆ ನೀತಿ ರಚನೆಗೆ ಸಂಬಂಧಿಸಿ ಸಲಹೆಗಳ ಟಿಪ್ಪಣಿಯೊಂದನ್ನು ಸಿದ್ಧಪಡಿಸಿರುವುದಾಗಿ ಅರ್ಜಿದಾರರ ಪರವಾಗಿ ವಾದಿಸಿದ ನ್ಯಾಯವಾದಿ ತಿಳಿಸಿದ್ದಾರೆ. ಆಗ ನ್ಯಾಯಾಲಯವು,ಅರ್ಜಿದಾರರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು.