ಮನಪಾ ನಿವೇಶನ ಹಂಚಿಕೆಯಲ್ಲಿ ದಲಿತರಿಗೆ ಅನ್ಯಾಯ: ಆರೋಪ
ಮಂಗಳೂರು, ನ.16: ಮಂಗಳೂರು ಮಹಾನಗರಪಾಲಿಕೆಯು ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯ ನಿವೇಶನ ರಹಿತರ ಹಂಚಿಕೆಯ ಪಟ್ಟಿಯಲ್ಲಿ ದಲಿತ ಸಮುದಾಯಕ್ಕೆ ನೀಡಬೇಕಾಗಿದ್ದ ಕಾನೂನುಬದ್ಧ ಪ್ರಮಾಣವನ್ನು ನೀಡದೆ ಅನ್ಯಾಯವೆಸಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಮಂಗಳೂರು ನಗರ ಸಮಿತಿ ಸಭೆಯು ಆರೋಪಿಸಿದೆ.
2021ರ ಫೆಬ್ರವರಿಯಲ್ಲಿ ಮನಪಾ ಮುಂದೆ ಪ್ರತಿಭಟನೆ ನಡೆಸಿ ಈ ಬಗ್ಗೆ ಅಧಿಕೃತ ಮನವಿ ಸಲ್ಲಿಸಲಾಗಿದ್ದರೂ ಮನಪಾ ಕ್ರಮ ಕೈಗೊಳ್ಳಲಿಲ್ಲ. ಒಂದು ತಿಂಗಳ ಕಾಲಾವಧಿಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮನಪಾ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಸಮಿತಿಯು ತೀರ್ಮಾನಿಸಿದೆ.
ಡಿ.26ರಂದು ಮಂಗಳೂರು ನಗರ ಮಟ್ಟದ ದಲಿತ ಚೈತನ್ಯ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಗರ ಸಮಿತಿ ಅಧ್ಯಕ್ಷ ನಾಗೇಂದ್ರ ಉರ್ವಸ್ಟೋರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಹಸಂಚಾಲಕ ಡಾ. ಕೃಷ್ಣಪ್ಪಕೊಂಚಾಡಿ, ಸಿಪಿಎಂ ನಾಯಕರಾದ ಸುನೀಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ರಘುವೀರ್, ರಾಧಾಕೃಷ್ಣ ಭಾಗವಹಿಸಿದ್ದರು. ನಗರ ಸಮಿತಿ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ವಂದಿಸಿದರು.