×
Ad

ವಿಧಾನ ಪರಿಷತ್ ಚುನಾವಣೆ; ದ.ಕ.ದಲ್ಲಿ ಅಧಿಸೂಚನೆ ಜಾರಿ

Update: 2021-11-16 20:10 IST

ಮಂಗಳೂರು, ನ.10: ವಿಧಾನ ಪರಿಷತ್ ಸದಸ್ಯರ ಅಧಿಕಾರ ಅವಧಿಯು 2022ರ ಜನವರಿ 5ರಂದು ಅಂತ್ಯಗೊಳ್ಳಲಿದ್ದು, ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಡಿ.10ಕ್ಕೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರದಲ್ಲಿ ಮಂಗಳವಾರದಿಂದ ಅಧಿಸೂಚನೆ ಜಾರಿಗೊಂಡಿದೆ.

ನ.23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದು ವಾರಿಕೆ ಹಿಂದಕ್ಕೆ ಪಡೆಯಲು ನ.26 ಕೊನೆಯ ದಿನವಾಗಿದೆ. ಡಿ.10ರಂದು ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಡಿ.14ರಂದು ಫಲಿತಾಂಶ ಪ್ರಕಟವಾಗಲಿದೆ. ಡಿ.16ರ ವೇಳೆಗೆ ಎಲ್ಲ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದು ಚುನಾವಣಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿಯಾದ ಡಾ.ರಾಜೇಂದ್ರ ಕೆ.ವಿ. ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಥವಾ ಅವರ ಸೂಚಕರು ನಾಮಪತ್ರಗಳನ್ನು ಚುನಾವಣಾಧಿಕಾರಿಯಾದ ದ.ಕ. ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸಲ್ಲಿಸಬೇಕು. ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಅಪರ ಜಿಲ್ಲಾಧಿಕಾರಿ ಯಾವುದೇ ದಿನದಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ (ಸರಕಾರಿ ರಜಾ ದಿನದ ಹೊರತು) ನಾಮಪತ್ರ ಸಲ್ಲಿಸಬಹುದಾಗಿದೆ.

ನಾಮಪತ್ರಗಳನ್ನು ಜಿಲ್ಲಾಧಿಕಾರಿಯ ನ್ಯಾಯಾಲಯದ ಸಭಾಂಗಣದಲ್ಲಿ ನ.24ರ ಬೆಳಗ್ಗೆ 11ಕ್ಕೆ ಪರಿಶೀಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News