ದೇಹದ ಹಿಂಭಾಗ ಸವರಿದ ಪ್ರಧಾನಿಯ ತಂದೆ: ಬ್ರಿಟನ್ ಮಹಿಳಾ ಸಂಸದೆ ಆರೋಪ

Update: 2021-11-16 15:24 GMT
photo:twitter/@carolinenokes

ಲಂಡನ್, ನ.16: ಬ್ರಿಟನ್ ನ ಪ್ರಧಾನಿ ಬೋರಿಸ್ ಜಾನ್ಸನ್ ತಂದೆ ಸ್ಟ್ಯಾನ್ಲಿ ಜಾನ್ಸನ್ ತನ್ನ ಹಿಂಭಾಗವನ್ನು ಅನುಚಿತವಾಗಿ ಸ್ಪರ್ಷಿಸಿದ್ದರು ಎಂದು ಬ್ರಿಟನ್‌ನ ಹಿರಿಯ ಸಂಸದೆ ಕ್ಯಾರೊಲಿನ್ ನೋಕ್ಸ್ ಆರೋಪಿಸಿದ್ದಾರೆ.

ಮಹಿಳೆಯರು ಮತ್ತು ಬಾಲಕಿಯರ ವಿರುದ್ಧ ನಡೆಯುವ ದೌರ್ಜನ್ಯದ ವಿಷಯದಲ್ಲಿ ಸ್ಕೈನ್ಯೂಸ್ ವಾಹಿನಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ಸರ್ವೇಟಿವ್ ಪಕ್ಷದ ಸಂಸದೆ ನೋಕ್ಸ್ ‘ಸ್ಟ್ಯಾನ್ಲಿ ಜಾನ್ಸನ್ ತನ್ನ ಪೃಷ್ಟವನ್ನು ತಟ್ಟಿದ್ದರು’ ಎಂದರು. ಕ್ಯಾರೊಲಿನ್ ನೋಕ್ಸ್ ಸಂಸತ್‌ ನ ಮಹಿಳೆ ಮತ್ತು ಸಮಾನತೆ ಆಯ್ಕೆ ಸಮಿತಿಯ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

2003ರಲ್ಲಿ ನಡೆದ ಈ ಘಟನೆ ನನಗೆ ನೆನಪಾಗುತ್ತಿದೆ. ಕನ್ಸರ್ವೇಟಿವ್ ಪಕ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಸ್ಟ್ಯಾನ್ಲಿ ನನ್ನ ಹಿಂಭಾಗದ ಮೇಲೆ ಕೈಯಿಂದ ತಟ್ಟಿದರು. ಬಳಿಕ ‘ಓ ರೋಮ್ಸಿ, ನಿಮ್ಮ ಸೀಟು (ಪೃಷ್ಟ) ಅದ್ಭುತವಾಗಿದೆ ಎಂದು ಉದ್ಘರಿಸಿದರು’ ಎಂದು ಕ್ಯಾರೊಲಿನ್ ಹೇಳಿದರು. ಕ್ಯಾರೊಲಿನ್ ನೋಕ್ಸ್ ಅವರು ರೋಮ್ಸಿ ಮತ್ತು ಸೌಥಾಂಪ್ಟನ್ ಉತ್ತರ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಟ್ಯಾನ್ಲಿ ಜಾನ್ಸನ್ ‘ ಕ್ಯಾರೊಲಿನ್ ನೋಕ್ಸ್‌ರ ಕುರಿತ ಯಾವುದೇ ವಿಷಯ ನನಗೆ ನೆನಪಾಗುತ್ತಿಲ್ಲ’ ಎಂದಿದ್ದಾರೆ. ಸ್ಟ್ಯಾನ್ಲಿ ಜಾನ್ಸನ್ ಬ್ರಿಟನ್ ಸಂಸತ್ತಿಗೆ ಆಯ್ಕೆಯಾಗಿರದಿದ್ದರೂ ಯುರೋಪಿಯನ್ ಸಂಸತ್ತಿನ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News