×
Ad

'ಇನ್ನೆರಡು ತಿಂಗಳಲ್ಲಿ ಉಡುಪಿ ಜಿಲ್ಲೆಯ ಶೇ.100 ಮಂದಿಗೆ ಲಸಿಕೆ ಗುರಿ ಸಾಧಿಸಿ'

Update: 2021-11-16 21:27 IST

ಉಡುಪಿ, ನ.16: ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇನ್ನೆರಡು ತಿಂಗಳು ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆಯನ್ನು ನೀಡುವ ಮೂಲಕ ಲಸಿಕೆ ನೀಡಿಕೆಯಲ್ಲಿ ಉಡುಪಿ ಜಿಲ್ಲೆ ಶೇ.100 ಗುರಿಯನ್ನು ಸಾಧಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸೂಚಿಸಿದ್ದಾರೆ.

ಧೀರ್ಘ ಸಮಯದ ಬಳಿಕ ಜಿಲ್ಲೆಯ ಭೇಟಿಗೆ ಆಗಮಿಸಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ವಿವಿಧ ಶಿಕ್ಷಣ ಸಂಸ್ಥೆಗಳು, ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿದರು. ಪ್ರಾರಂಭದಲ್ಲಿ ನಗರದ ಅಲಂಕಾರ್ ಥಿಯೇಟರ್ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಕಳೆದ ಜ.15ರಿಂದ ಅಂದರೆ ಲಸಿಕೆಯನ್ನು ನೀಡಲು ಪ್ರಾರಂಭಿಸಿದ ದಿನದಿಂದ ಈ ಕೇಂದ್ರದಲ್ಲಿ 15,000ಕ್ಕೂ ಅಧಿಕ ಮಂದಿಗೆ ಮೊದಲ ಮತ್ತು ಎರಡನೇ ಲಸಿಕೆಯನ್ನು ನೀಡಲಾಗಿದೆ ಎಂದು ವೈದ್ಯಕೀಯ ಅಧಿಕಾರಿ ಡಾ.ಹೇಮಂತ್ ತಿಳಿಸಿದರು. ಕೇಂದ್ರದ ಪ್ರಗತಿಯ ವಿವರಗಳನ್ನು ಪಡೆದ ನ್ಯಾ.ಶೆಟ್ಟಿ, ಅಲ್ಲಿ ಲಸಿಕೆಗೆಂದು ಆಗಮಿಸಿದ್ದ ಸಾರ್ವಜನಿಕರಿಂದಲೂ ಮಾಹಿತಿ, ಅನಿಸಿಕೆಗಳನ್ನು ಕೇಳಿ ಪಡೆದರು.

ತಮ್ಮ ಸರದಿಯ ಎರಡನೇ ಲಸಿಕೆಗಾಗಿ ಆಗಮಿಸಿದ ಕಡೆಕಾರಿನ ಕಲಾವತಿ, ಅಂಬಲಪಾಡಿ ಹಾಗೂ ಮೂಳೂರಿನ ಮಹಿಳೆಯರಿಂದಲೂ ಅವರು ಕೆಲ ವಿವರಗಳನ್ನು ಕೇಳಿ ಪಡೆದರು. ಮೊದಲ ಲಸಿಕೆ ಪಡೆದು 84 ದಿನ ಮುಗಿದ ತಕ್ಷಣ ಎರಡನೇ ಲಸಿಕೆಗೆ ಬಂದಿರುವ ಮಹಿಳೆಯೊಬ್ಬರನ್ನು ಅವರು ಅಭಿನಂದಿಸಿದರು.

ಲಸಿಕೆ ಪಡೆದು ಅರ್ಧಗಂಟೆಯ ಪರಿವೀಕ್ಷಣೆಯಲ್ಲಿದ್ದ ಜನರ ಬಳಿಗೆ ತೆರಳಿ ಅವರಿಂದಲೂ ಕೆಲವು ಮಾಹಿತಿಗಳನ್ನು ಕೇಳಿ ಪಡೆದರು. ಎರಡನೇ ಲಸಿಕೆಯನ್ನು ಪಡೆದಿದ್ದ ಕಾಲೇಜು ವಿದ್ಯಾರ್ಥಿ ಗೌತಮ್‌ನನ್ನು ಅಭಿನಂದಿಸಿದ ಅವರು ನಿನ್ನ ಉಳಿದೆಲ್ಲಾ ಸಹಪಾಠಿ ಗಳಿಗೂ ಲಸಿಕೆ ಪಡೆಯಲು ತಿಳಿಸು ಹಾಗೂ ಲಸಿಕೆ ಪಡೆಯುವಂತೆ ನೋಡಿಕೋ ಎಂದು ಸಲಹೆ ನೀಡಿದರು.

ಕಲಿತ ಶಾಲೆಯಲ್ಲಿ ನೆನಪಿನ ಯಾನ: ಇಂದು ತಾನು ಆರನೇ ತರಗತಿಯಿಂದ 10ನೇ ತರಗತಿಯವರೆಗೆ ಕಲಿತ ಅಂದಿನ ಬೋರ್ಡ್ ಹೈಸ್ಕೂಲ್‌ಗೆ (ಇಂದಿನ ಸರಕಾರಿ ಪದವಿ ಪೂರ್ವ ಕಾಲೇಜು) ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಇಂದು ಭೇಟಿ ನೀಡಿ ಅಂದಿನ ಮಧುರ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.

ತಾನು ಕಲಿತ ಶಾಲೆ ಇಂದು ಸಾಧಿಸಿದ ಪ್ರಗತಿ, ಆಗಿರುವ ಅಭಿವೃದ್ಧಿಯ ಕುರಿತಂತೆ ಮೆಚ್ಚುಗೆಯ ನುಡಿಗನ್ನಾಡಿದ ಅವರು, ಉಡುಪಿ ಜಿಲ್ಲೆಯ ಗಣ್ಯರೆಲ್ಲರೂ ಈ ಶಾಲೆಯಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಪ್ರಸಿದ್ಧರಾಗಿ ರುವುದನ್ನು ನೆನಪಿಸಿಕೊಂಡು ಹೆಮ್ಮೆ ಪಟ್ಟರು. ತಮಗೆ ಅಂದು ಕಲಿಸಿದ ಅಧ್ಯಾಪಕರು, ಅದರಲ್ಲೂ ಮುಖ್ಯೋಪಾಧ್ಯಾಯರಾಗಿದ್ದ ಅನಂತಕೃಷ್ಣ ಸಾಮಗರ ಬಗ್ಗೆ ವಿವರಗಳನ್ನು ಇಂದಿನ ಮುಖ್ಯೋಪಾದ್ಯಾಯರಾದ ಸುರೇಶ್ ಭಟ್‌ ರಿಂದ ವಿಚಾರಿಸಿದರು.

ಈ ಶಾಲೆಯ ವಿದ್ಯಾರ್ಥಿಗಳಾದ ಅಶ್ಲೇಷ, ಭೀಮಗೌಡ ಹಾಗೂ ಪ್ರದೀಪ್ ಸೇರಿ ಕೇವಲ 300ರೂ. ವೆಚ್ಚದಲ್ಲಿ ನಿರ್ಮಿಸಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಾಗದದ ಗೂಡುದೀಪವನ್ನು ಆಸಕ್ತಿಯಿಂದ ವೀಕ್ಷಿಸಿ, ತಾವು ಅಂದಿನ ದಿನಗಳಲ್ಲಿ ಕಷ್ಟಪಟ್ಟು ನಿರ್ಮಿಸುತಿದ್ದ ಬಣ್ಣದ ಕಾಗದದ ಗೂಡುದೀಪಗಳನ್ನು ನೆನಪಿಸಿ ಕೊಂಡರು.

ಶಾಲೆಯ ಕೋಣೆಕೋಣೆಗೆ ತೆರಳಿ ವೀಕ್ಷಿಸಿದ ಅವರು, ತುಂಬಾ ಹಳೆಯದಾದ ವಿಶಾಲ ಸಭಾಂಗಣದಲ್ಲಿ ಇರಿಸಿದ ನಾಡಿನ ಗಣ್ಯರ, ಸಾಹಿತಿಗಳ, ಶಾಲೆಯ ಅಂದಿನ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರ ವರ್ಣಚಿತ್ರಗಳನ್ನು ವೀಕ್ಷಿಸಿ ಬಾವುಕರಾದರು.

ವಿದ್ಯಾರ್ಥಿಗಳಿಗೆ ಕಿವಿಮಾತು: ಶಾಲೆಯಲ್ಲಿ ವಿವಿದೆಡೆಗಳಿಂದ ಆಗಮಿಸಿದ ಹೈಸ್ಕೂಲ್ ವಿದ್ಯಾರ್ಥಿಗಳು ಬರೆಯುತಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಸಂಬಂಧ ಪ್ರಬಂಧ ಸ್ಪರ್ಧೆಯ ಕೋಣೆಗೆ ಬಂದ ನ್ಯಾಯಮೂರ್ತಿಗಳು ಎಲ್ಲಾ ವಿದ್ಯಾರ್ಥಿಗಳು ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಹಾಗೂ ಮನೆಯಲ್ಲಿರುವವರೆಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ನೋಡಿಕೊಳ್ಳುವಂತೆ ತಿಳಿಸಿದರು.

ಮಕ್ಕಳ ಭವಿಷ್ಯದ ಕುರಿತು ಪ್ರಶ್ನಿಸಿದ ಅವರು ಐಎಎಸ್, ಐಪಿಎಸ್, ಇಂಜಿನಿಯರ್ ಹಾಗೂ ವೈದ್ಯರಾಗುವವರು ಕೈಎತ್ತುವಂತೆ ತಿಳಿಸಿದರು. ಆದರೆ ಯಾರೊಬ್ಬರೂ ವಕೀಲ, ನ್ಯಾಯವಾದಿಯಾಗುವ ಇಚ್ಛೆ ವ್ಯಕ್ತಪಡಿಸಲಿಲ್ಲ. ಶ್ರಮವಹಿಸಿ ಕಲಿತು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಬಳಿಕ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯ ಹಾಗೂ ಪಕ್ಕದ ಸಖೀ ಒನ್‌ಸ್ಟಾಪ್ ಕೇಂದ್ರಕ್ಕೆ ತೆರಳಿ ಅಲ್ಲಿರುವ ಇನ್‌ಮೇಟ್‌ಗಳ ಬಳಿ ಮಾತನಾಡಿ ದರು. ಮಹಿಳಾ ನಿಲಯದಲ್ಲಿರುವ 64 ಮಹಿಳೆಯರು ಹಾಗೂ ನಾಲ್ವರು ಮಕ್ಕಳ ಕುರಿತು ಪ್ರಶ್ನಿಸಿ, ಅಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಸಿಬ್ಬಂದಿಗಳಿಗೆ ಕಟುವಾದ ಸೂಚನೆ ನೀಡಿದರು. ಅಲ್ಲಿನ ಮಹಿಳೆಯರು ನಡೆಸುವ ಸ್ವಉದ್ಯೋಗವನ್ನು ಪರಿಶೀಲಿಸಿ ಅವರ ದುಡಿಮೆಗೆ ಇನ್ನೂ ಹೆಚ್ಚಿನ ವೇತನ ನೀಡುವಂತೆ ಸೂಚಿಸಿದರು. ಕೌಟುಂಬಿಕ ದೌರ್ಜನ್ಯಕ್ಕೊಳಗಾಗಿರುವ ಮೂವರು ಇದೀಗ ಸಖೀ ಕೇಂದ್ರ ದಲ್ಲಿದ್ದು, ಅವರ ಬಗ್ಗೆ ವಿಚಾರಿಸಿದರು.

ಹಾಡು ಹೇಳಿದ ಬಾಲಕಿ: ನಂತರ ಲೋಕಾಯುಕ್ತರು ಹನುಮಂತ ನಗರದ ಸರಕಾರಿ ಪ್ರೌಢ ಶಾಲೆಗೆ ತೆರಳಿ ಪರಿಶೀಲಿಸಿದರು. ಎಂಟನೇ ತರಗತಿಗೆ ತೆರಳಿದ ಅವರು, ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅಧ್ಯಾಪಕರೊಂದಿಗೆ ಚರ್ಚಿಸಿದರು. ಬಳಿಕ ಮಕ್ಕಳ ಬಳಿ ಹಾಡುವಂತೆ ಸೂಚಿಸಿದಾಗ ನಿಟ್ಟೂರು ಮಹಿಳಾ ನಿಲಯದ ನಿವಾಸಿ ದಿವ್ಯಶ್ರೀ ಜಾನಪದ ಗೀತೆಯೊಂದನ್ನು ಸುಶ್ರಾವ್ಯ ಕಂಠದಿಂದ ಹಾಡಿ ನ್ಯಾಯಮೂರ್ತಿಗಳ ಮೆಚ್ಚುಗೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News