ಕೋಟ: ಸಕಾಲಕ್ಕೆ ಆಸ್ಪತ್ರೆ ದಾಖಲಿಸಿ ಬೈಕ್ ಸವಾರನ ಜೀವ ಉಳಿಸಿದ ಪೊಲೀಸರು
ಕೋಟ, ನ.16: ಎದೆನೋವಿನಿಂದ ಬಳಲುತ್ತಿದ್ದ ಬೈಕ್ ಸವಾರನನ್ನು ಹೈವೆ ಪಟ್ರೋಲ್‌ನ ಪೊಲೀಸ್ ಸಿಬ್ಬಂದಿ ಸಕಾಲದಲ್ಲಿ ಆಸ್ಪತ್ರೆ ದಾಖಲಿಸುವ ಮೂಲಕ ಜೀವ ಉಳಿಸಿರುವ ಘಟನೆ ಸೋಮವಾರ ಕೋಟ ಬಳಿ ನಡೆದಿದೆ.
ಉಪ್ಪೂರು ಸಮೀಪ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಗಂದೂರು ಮೂಲದ ಸುನೀಲ್ ಎಂಬವರಿಗೆ ಎದೆನೋವು ಕಾಣಿಸಿ ಕೊಂಡಿದ್ದು, ಸ್ಥಳೀಯ ಆಸ್ಪತ್ರೆಯ ಸೂಚನೆಯಂತೆ ಅವರು ಸ್ಕ್ಯಾನಿಂಗ್ ಮಾಡಲು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಬೈಕಿನಲ್ಲಿ ಹೋಗುತ್ತಿದ್ದರು.
ದಾರಿ ಮಧ್ಯೆ ಸುನೀಲ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಇದರಿಂದ ಭಯಭೀತರಾದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೈವೆ ಪ್ರಟ್ರೋಲ್ ಪೋಲಿಸರ ಸಹಾಯಯಾಚಿಸಿದರು. ಸಾಸ್ತಾನದ ಟೋಲ್ ಆ್ಯಂಬ್ಯುಲೇನ್ಸ್ ಕರೆ ಮಾಡಿದರು. ಆದರೂ ಆ್ಯಂಬುಲೆನ್ಸ್ ಸ್ಥಳಕ್ಕೆ ಬರಲಿಲ್ಲ.
ಆ ಹಿನ್ನೆಲೆಯಲ್ಲಿ ಹೈವೆ ಪಟ್ರೋಲ್ ವಾಹನ ಚಾಲಕ ಪ್ರಶಾಂತ್ ಪಡುಕರೆ ಹಾಗೂ ಎಎಸ್ಸೈ ಸುಧಾಕರ್ ತಮ್ಮ ಇಲಾಖಾ ವಾಹನದಲ್ಲಿ ಸುನೀಲ್ ರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸಕಾಲದಲ್ಲಿ ಚಿಕಿತ್ಸೆ ಸಿಗುವಂತೆ ಮಾಡಿದರು. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.