ಅಡಿಕೆ, ತೆಂಗಿನಕಾಯಿ ಕಳವಿಗೆ ಯತ್ನ : ದೂರು
Update: 2021-11-16 21:57 IST
ಕಾರ್ಕಳ, ನ.16: ಅಡಿಕೆ ಹಾಗೂ ತೆಂಗಿನ ಕಾಯಿ ತುಂಬಿದ್ದ ಗೋಣಿ ಚೀಲಗಳನ್ನು ಕಳವು ಮಾಡಿರುವ ಘಟನೆ ಕಲ್ಯಾ ಗ್ರಾಮದ, ಕೈಕಂಬ ಮಂಡೆಚ್ಚಾರು ಎಂಬಲ್ಲಿ ನಡೆದಿದೆ.
ಕುಕ್ಕುಂದೂರು ಗುಂಡ್ಯಡ್ಕ ನಿವಾಸಿ ಹರೀಶ್ ಅಮೀನ್ ಎಂಬವರ ಮಾಲಕತ್ವದ ಮಂಡೆಚ್ಚಾರುವಿನಲ್ಲಿರುವ ಅಡಿಕೆ ತೋಟಕ್ಕೆ ಕಾರ್ತಿಕ್ ಹಾಗೂ ಇತರ ಮೂವರು ನ.15ರಂದು ಅಟೋರಿಕ್ಷಾದಲ್ಲಿ ಬಂದು ಮೂರು ಗೋಣಿ ಚೀಲ ಅಡಿಕೆ ಹಾಗೂ ಒಂದು ಗೋಣಿ ಚೀಲ ತೆಂಗಿನ ಕಾಯಿಗಳನ್ನು ಕಳವು ವಾಡಲು ರಿಕ್ಷಾಕ್ಕೆ ತುಂಬಿಸುತ್ತಿದ್ದರು.
ಈ ವೇಳೆ ಕಳ್ಳರು, ಹರೀಶ್ ಅಮೀನ್ ಹಾಗೂ ಅವರ ಸ್ನೇಹಿತರನ್ನು ಕಂಡು ಹಾಡಿಯಲ್ಲಿ ಓಡಿ ಹೋದರು. ಕೂಡಲೇ ಹರೀಶ್ ಅಮೀನ್ ಹಾಗೂ ಅವರ ಸ್ನೇಹಿತರು, ಅಟೋರಿಕ್ಷಾವನ್ನು ಬೆನ್ನಟ್ಟಿ ಚಾಲಕನನ್ನು ಹಿಡಿದರೆನ್ನಲಾಗಿದೆ. ಕಳವು ಮಾಡಲು ಯತ್ನಿಸಿರುವ ಸೊತ್ತುಗಳ ಒಟ್ಟು ಮೌಲ್ಯ 30,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.