ಕಾಬೂಲ್ ಪಾಸ್‌ಪೋರ್ಟ್ ಕಚೇರಿ ಕಾರ್ಯನಿರ್ವಹಣೆ ಸ್ಥಗಿತ

Update: 2021-11-16 17:50 GMT
photo:twitter/@ndtvfeed

 

ಕಾಬೂಲ್, ನ.16: ಪ್ರತೀ ದಿನ ಸಾವಿರಾರು ಅರ್ಜಿಗಳನ್ನು ಪರಿಷ್ಕರಿಸುವ ಒತ್ತಡದ ಹಿನ್ನೆಲೆಯಲ್ಲಿ ಬಯೊಮೆಟ್ರಿಕ್ ದಾಖಲೆ ಪ್ರತಿ ಒದಗಿಸುವ ವ್ಯವಸ್ಥೆ ಕೆಟ್ಟುಹೋದ ಕಾರಣ ಕಾಬೂಲ್‌ನ ಪಾಸ್‌ಪೋರ್ಟ್ ಕಚೇರಿಯ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗಿದೆ ಎಂದು ಕಚೇರಿಯ ಮುಖ್ಯಸ್ಥರು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಅಧಿಕಾರದಡಿ ತಮ್ಮ ಭವಿಷ್ಯದ ಕುರಿತ ಆತಂಕ ಹಾಗೂ ದೇಶದಲ್ಲಿ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಿಂದ ಹೊರತೆರಳ ಬಯಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಪ್ರತೀ ದಿನ 15,000ದಿಂದ 20,000ದಷ್ಟು ಮಂದಿ ಪಾಸ್‌ಪೋರ್ಟ್ ಕಚೇರಿಗೆ ಆಗಮಿಸುತ್ತಿದ್ದಾರೆ. ಇದು ಕಚೇರಿಯ ಕಾರ್ಯಸಾಮರ್ಥ್ಯಕ್ಕಿಂತ ಸುಮಾರು 6 ಪಟ್ಟು ಅಧಿಕವಾಗಿದೆ. ಹಲವರು ಕಚೇರಿಯ ಆವರಣದಲ್ಲೇ ರಾತ್ರಿ ಕಳೆಯುತ್ತಾರೆ ಎಂದು ಪಾಸ್‌ಪೋರ್ಟ್ ಇಲಾಖೆಯ ನಿರ್ದೇಶಕ ಅಲಾಮ್ ಗುಲ್ ಹಕ್ಕಾನಿ ಹೇಳಿದ್ದಾರೆ. ಈ ಮಧ್ಯೆ, ನಕಲಿ ದಾಖಲೆ ಪತ್ರ ಸಲ್ಲಿಸಿ ಪಾಸ್‌ಪೋರ್ಟ್ ಪಡೆಯಲು ಯತ್ನಿಸಿದ ಪ್ರಕರಣದಲ್ಲಿ 60 ಮಂದಿಯನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಹೇಳಿದೆ. ಪಾಸ್‌ಪೋರ್ಟ್ ಮಂಜೂರುಗೊಳಿಸಲು ಕಚೇರಿಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುತ್ತಿರುವ ಬಗ್ಗೆ ಹಲವು ದೂರು ಕೇಳಿಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News