ಲಿಬಿಯಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ಖಲೀಫಾ ಹಫ್ತರ್ ಘೋಷಣೆ

Update: 2021-11-16 18:29 GMT
photo;twitter/@AJEnglish

ಟ್ರಿಪೋಲಿ, ನ.16: ಮುಂದಿನ ತಿಂಗಳು ದೇಶದಲ್ಲಿ ನಡೆಯಲಿರುವ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪೂರ್ವ ಸೇನಾ ಕಮಾಂಡರ್ ಖಲೀಫಾ ಹಫ್ತರ್ ಘೋಷಿಸಿದ್ದಾರೆ.

 ಎದುರಾಗಿರುವ ತೀವ್ರ ಬಿಕ್ಕಟ್ಟಿನಿಂದ ದೇಶವನ್ನು ಪಾರುಗೊಳಿಸಲು ಚುನಾವಣೆ ಏಕೈಕ ಮಾರ್ಗವಾಗಿದೆ ಎಂದವರು ಹೇಳಿದ್ದಾರೆ. ಲಿಬಿಯನ್ ನ್ಯಾಷನಲ್ ಆರ್ಮಿ(ಎಲ್ಎನ್ಎ) ಎಂದು ಕರೆಸಿಕೊಳ್ಳುವ ಪಡೆಯ ಕಮಾಂಡರ್ ಆಗಿರುವ ಹಫ್ತರ್, 2014ರಲ್ಲಿ ದೇಶ ವಿಭಾಗವಾದಾಗ, ಪಶ್ಚಿಮ ಭಾಗದ ಸೇನೆಯ ವಿರುದ್ಧ ಯುದ್ಧ ಘೋಷಿಸಿದ್ದರು. ಇವರ ನೇತೃತ್ವದ ಪೂರ್ವವಿಭಾಗದ ಸೇನಾ ಪಡೆ ರಾಜಧಾನಿ ಟ್ರಿಪೋಲಿಯ ವಶಕ್ಕೆ 14 ತಿಂಗಳ ಸಂಘರ್ಷ ನಡೆಸಿತ್ತು. ಆದರೆ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರ ಇವರನ್ನು ಹಿಮ್ಮೆಟ್ಟಿಸಿತ್ತು. 

ರಶ್ಯಾ, ಈಜಿಪ್ಟ್ ಮತ್ತು ಯುಎಇಯ ಬೆಂಬಲ ಪಡೆದಿರುವ ಹಫ್ತರ್ ವಿವಾದಾತ್ಮಕ ವ್ಯಕ್ತಿಯಾಗಿದ್ದು , ದೇಶದಲ್ಲಿ ಸೇನೆಯ ಆಡಳಿತವನ್ನು ಸ್ಥಾಪಿಸಲು ಬಯಸಿದ್ದರು ಎಂದು ಇವರ ಬಗ್ಗೆ ಪಶ್ಚಿಮ ಲಿಬಿಯಾದಲ್ಲಿ ಜನತೆಗೆ ಆಕ್ರೋಶವಿದೆ. ಟ್ರಿಪೋಲಿಗೆ ಮುತ್ತಿಗೆ ಹಾಕಿದ ಸಂದರ್ಭ ಹಫ್ತರ್ ನೇತೃತ್ವದ ಪಡೆ ವ್ಯಾಪಕ ಯುದ್ಧಾಪರಾಧ ಎಸಗಿರುವ ಆರೋಪವಿದ್ದು, ಹಫ್ತರ್ಗೆ ಪಶ್ಚಿಮ ಲಿಬಿಯಾದಲ್ಲಿ ಒಂದೂ ಮತ ಬೀಳಬಾರದು ಎಂದು ಇಲ್ಲಿನ ಜನತೆ ಹೇಳುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News