×
Ad

ಶ್ರೀನಗರ: ವಿವಾದಾತ್ಮಕ ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ನಾಗರಿಕರ ಹತ್ಯೆ; ತನಿಖೆಗೆ ಆದೇಶ

Update: 2021-11-18 11:50 IST

ಶ್ರೀನಗರ,ನ.18: ಕಳೆದ ಸೋಮವಾರದ ವಿವಾದಾತ್ಮಕ ಕಾರ್ಯಾಚರಣೆಯಲ್ಲಿ ಓರ್ವ ಉದ್ಯಮಿ ಮತ್ತು ಓರ್ವ ದಂತವೈದ್ಯರ ಹತ್ಯೆಯ ವಿರುದ್ಧ ಮಡುವುಗಟ್ಟಿರುವ ತೀವ್ರ ಆಕ್ರೋಶದ ನಡುವೆಯೇ ಘಟನೆಯ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಗೆ ಜಮ್ಮು-ಕಾಶ್ಮೀರ ಆಡಳಿತವು ಗುರುವಾರ ಆದೇಶಿಸಿದೆ. ಅವರನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಮೃತರ ಕುಟುಂಬಗಳು ಆರೋಪಿಸಿದ್ದರೆ,ಮೃತರು ಭಯೋತ್ಪಾದಕರ ಸಹವರ್ತಿಗಳಾಗಿದ್ದರು ಎಂದು ಭದ್ರತಾ ಪಡೆಗಳು ಸಮಜಾಯಿಷಿ ನೀಡಿವೆ. ಪ್ರಕರಣದ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೋರ್ವರು ತನಿಖೆಯನ್ನು ನಡೆಸಲಿದ್ದಾರೆ.

‘ಸಂತ್ರಸ್ತ ಕುಟುಂಬಗಳ ಬೇಡಿಕೆಗಳನ್ನು ನಾವು ಪರಿಶೀಲಿಸುತ್ತೇವೆ. ಏನಾದರೂ ತಪ್ಪು ನಡೆದಿದ್ದರೆ ಸರಿಪಡಿಸಲು ನಾವು ಸಿದ್ಧರಿದ್ದೇವೆ. ಏನು ತಪ್ಪು ನಡೆದಿದೆ ಎನ್ನುವುದನ್ನು ಪೊಲೀಸ್ ತನಿಖೆಯೂ ಪತ್ತೆ ಹಚ್ಚಲಿದೆ. ಹೈದರ್‌ಪೋರ ಎನ್‌ಕೌಂಟರ್‌ನಲ್ಲಿ ಏನು ನಡೆದಿತ್ತು ಎನ್ನುವುದನ್ನು ನಾವು ಪತ್ತೆ ಹಚ್ಚುತ್ತೇವೆ. ನಾವು ಜನರ ಸುರಕ್ಷತೆಗಾಗಿ ಇದ್ದೇವೆ ಮತ್ತು ತನಿಖೆಗೆ ಹಿಂಜರಿಯುವುದಿಲ್ಲ ’ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಯಾವುದೇ ಅನ್ಯಾಯವಾಗದಂತೆ ತಾನು ನೋಡಿಕೊಳ್ಳುವುದಾಗಿ ಟ್ವೀಟಿಸಿರುವ ಜಮ್ಮು-ಕಾಶ್ಮೀರ ಉಪ ರಾಜ್ಯಪಾಲರ ಕಚೇರಿಯು,ಹೈದರ್‌ಪೋರ ಎನ್‌ಕೌಂಟರ್ ಕುರಿತು ಉಪವಿಭಾಗಾಧಿಕಾರಿಗಳ ದರ್ಜೆಯ ಅಧಿಕಾರಿಯಿಂದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ. ಕಾಲಮಿತಿಯಲ್ಲಿ ವರದಿ ಸಲ್ಲಿಕೆಯಾದ ತಕ್ಷಣ ಸರಕಾರವು ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ. ಅಮಾಯಕ ನಾಗರಿಕರ ಜೀವರಕ್ಷಣೆಗೆ ತನ್ನ ಬದ್ಧತೆಯನ್ನು ಆಡಳಿತವು ಪುನರುಚ್ಚರಿಸುತ್ತದೆ ಎಂದು ತಿಳಿಸಿದೆ.

ಹೈದರ್‌ಪೋರದಲ್ಲಿಯ ಸಂಕೀರ್ಣವೊಂದರಲ್ಲಿ ನಡೆದಿದ್ದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಉದ್ಯಮಿ ಅಲ್ತಾಫ್ ಭಟ್ ಮತ್ತು ದಂತವೈದ್ಯ ಮುದಸ್ಸಿರ್ ಗುಲ್ ಅವರು ಕೊಲ್ಲಲ್ಪಟ್ಟಿದ್ದರು. ಅವರು ಭಯೋತ್ಪಾದಕರ ಗುಂಡುಗಳಿಗೆ ಬಲಿಯಾಗಿದ್ದಾರೆ ಎಂದು ಆರಂಭದಲ್ಲಿ ಹೇಳಿಕೊಂಡಿದ್ದ ಪೊಲೀಸರು,ಗುಂಡಿನ ಚಕಮಕಿಯಲ್ಲಿ ಅವರು ಕೊಲ್ಲಲ್ಪಟ್ಟಿರಬಹುದು ಎಂದು ನಂತರ ಹೇಳಿದ್ದರು. ಇಬ್ಬರೂ ಭಯೋತ್ಪಾದಕರ ಸಹವರ್ತಿಗಳಾಗಿದ್ದರು ಎಂಬ ಪೊಲೀಸರ ಆರೋಪವು ಮೃತರ ಕುಟುಂಬಗಳು ಮತ್ತು ಆಡಳಿತದ ಟೀಕಾಕಾರರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಆಮಿರ್ ಮಾಗ್ರೇ ಕೊಲ್ಲಲ್ಪಟ್ಟವರಲ್ಲಿ ಒಬ್ಬರಾಗಿದ್ದು,ಅವರ ತಂದೆ ಲತೀಫ್ ಮಾಗ್ರೇ ಅವರನ್ನು 2005ರಲ್ಲಿ ಭಯೋತ್ಪಾದಕನೋರ್ವ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದ. ಸೇನೆಯು ಅವರ ಧೈರ್ಯವನ್ನು ಪ್ರಶಂಸಿಸಿ ಮೆಚ್ಚುಗೆ ಪತ್ರವನ್ನು ನೀಡಿತ್ತು.

‘ಹೈಬ್ರಿಡ್ ಭಯೋತ್ಪಾದಕ ’ಎಂದು ಪೊಲೀಸರು ಬಣ್ಣಿಸಿರುವ ಆಮಿರ್ ಮಾಗ್ರೇ,ದಂತವೈದ್ಯರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News