ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆ; ಮಂಗಳೂರಿನಿಂದ ಎಂಎನ್‌ಆರ್‌ಗೆ ಕಾಂಗ್ರೆಸ್ ಟಿಕೇಟ್ ನೀಡಲು ಚಿಂತನೆ ?
ಉಡುಪಿ, ನ.18: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಈ ಬಾರಿ ರಾಜ್ಯ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಈ ಬಾರಿಯ ಕಾಂಗ್ರೆಸ್ ಟಿಕೇಟ್ ನೀಡುವ ಸಾಧ್ಯತೆ, ಸಹಕಾರಿ ಧುರೀಣ ಹಾಗೂ ಎಸ್‌ಸಿಡಿಸಿಸಿ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರು ಪಕ್ಷೇತರರಾಗಿ ಸ್ಪರ್ಧಿಸಲು ತೆಗೆದುಕೊಂಡ ಖಚಿತ ನಿರ್ಧಾರದಿಂದ ಬದಲಾಗಿರುವ ಮಾಹಿತಿ ಬಂದಿದೆ.
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರೊಬ್ಬರನ್ನು ಈ ಬಾರಿ ಅಭ್ಯರ್ಥಿಯಾಗಿ ನಿಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದರು. ಇದರಿಂದ ಉಭಯ ಜಿಲ್ಲೆಗಳ ಒಟ್ಟು 11 ಮಂದಿ ಸ್ಪರ್ಧಿಸುವ ಆಕಾಂಕ್ಷೆಯೊಂದಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇವರಲ್ಲಿ ಮೂವರನ್ನು ನಿನ್ನೆ - ಮಂಜುನಾಥ ಭಂಡಾರಿ, ಯು.ವಿ.ಶೆಟ್ಟಿ, ಭುಜಂಗ ಶೆಟ್ಟಿ- ಮಾತುಕತೆಗೆ ಬೆಂಗಳೂರಿಗೂ ಕರೆದಿದ್ದರು. ಪ್ರಾಥಮಿಕ ಸುತ್ತಿನ ಮಾತುಕತೆಯ ಬಳಿಕ ಬಿ.ಭುಜಂಗ ಶೆಟ್ಟರಿಗೆ ಟಿಕೇಟ್ ನೀಡಲು ಸಹಮತವೂ ವ್ಯಕ್ತವಾಗಿತ್ತು ಎಂದು ತಿಳಿದುಬಂದಿದೆ.
ಈ ನಡುವೆ ಈ ಬಾರಿ ಸಹಕಾರಿ ಕ್ಷೇತ್ರದ ಸದಸ್ಯರ ಬೆಂಬಲದೊಂದಿಗೆ ಸ್ಪರ್ಧಿಸಲು ರಾಜೇಂದ್ರ ಕುಮಾರ್ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲಿ ಸಂಚಲನವನ್ನು ಮೂಡಿಸಿತ್ತು. ಇದರಿಂದ ದೊಡ್ಡ ಪ್ರಮಾಣದ ಏಟು ಕಾಂಗ್ರೆಸ್ ಪಕ್ಷಕ್ಕೆ ಎಂಬುದನ್ನು ಮನಗಂಡ ಕಾಂಗ್ರೆಸ್ ನಾಯಕರು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಎಂಎನ್‌ಆರ್‌ಗೆ ಕಾಂಗ್ರೆಸ್‌ನಿಂದ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ.
ಆದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಪ್ರಥಮ ಆದ್ಯತೆ ನೀಡುವುದಾಗಿ ಘೋಷಿಸಿದ್ದ ಡಿಕೆಶಿ, ಕೊನೆಗೆ ನಾಯಕರ ಒತ್ತಾಯಕ್ಕೆ ಮಣಿದು ರಾಜೇಂದ್ರ ಕುಮಾರ್ ಪಕ್ಷದ ಸದಸ್ಯರಾಗಿ ಸೇರ್ಪಡೆಗೊಂಡರೆ ಟಿಕೇಟ್ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದು, ರಾಜೇಂದ್ರ ಕುಮಾರ್ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದೂ ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಇದೀಗ ದಕ್ಷಿಣ ಕನ್ನಡ-ಉಡುಪಿಯ ಎರಡು ಸ್ಥಾನಗಳಲ್ಲಿ ಒಂದನ್ನು ಬಿಜೆಪಿ ಗೆಲ್ಲುವುದು ಖಚಿತವಾಗಿದ್ದು, ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಮತ್ತೊಂದು ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆಯನ್ನು ಹೊಸದಿಲ್ಲಿಯಲ್ಲಿ ಹೈಕಮಾಂಡ್ ನಿರ್ಧರಿಸುವ ಸಾಧ್ಯತೆ ಇದೆ. ಇದಕ್ಕಾಗಿ ರಾಜ್ಯ ನಾಯಕರು ಇಂದು ಹೊಸದಿಲ್ಲಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮೂರು ಬಾರಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರತಾಪ್ ಚಂದ್ರ ಶೆಟ್ಟಿ ಅವರು ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಟಿಕೇಟ್ ನೀಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಇಚ್ಛೆ ಕೊನೆಯ ಕ್ಷಣದ ಬೆಳವಣಿಗೆಯಿಂದ ಬದಲಾಗುವ ಸಾಧ್ಯತೆ ಇದೆ.
ಇದು 2016ರ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಅವರ ಉಚ್ಛಾಟಣೆಗೆ ಕಾರಣವಾದಂತೆ ಮತ್ತೊಂದು ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.