ರಾಷ್ಟ್ರೀಯ ಶಿಕ್ಷಣ ನೀತಿಯ ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಿ: ರಾಜ್ಯ ಸರಕಾರಕ್ಕೆ ಎನ್‌ಎಸ್‌ಯುಐ ಆಗ್ರಹ
ಮಂಗಳೂರು, ನ. 18: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟದಲ್ಲಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಶಿಕ್ಷಣ ಸಂಸ್ಥೆಗಳು ಖಾಸಗೀಕರಣಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಹೋರಾಟ ಮುಂದುವರಿಯಲಿದೆ ಎಂದು ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಪ್ರತಿ ಕಾಲೇಜಿನಲ್ಲಿ ಜಾಗೃತಿ, ಕರಪತ ಹಂಚಿಕೆಯ ಮೂಲಕ ವಿದ್ಯಾರ್ಥಿಗಳ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಜಾರಿಗೊಳಿಸಲು ಹೊರಟಿದೆಯಾದರೂ ಈ ಬಗ್ಗೆ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗಾಗಿ, ವಿದ್ಯಾರ್ಥಿಗಳಿಗಾಗಲಿ ಅಥವಾ ಜನಸಾಮಾನ್ಯರಿಗಾಗಲಿ ಯಾವುದೇ ಅರಿವು ಇಲ್ಲವಾಗಿದೆ. ಇದು ಶಿಕ್ಷಣ ವ್ಯವಸ್ಥೆಯನ್ನೇ ಹಿಂದಕ್ಕೆ ತಳ್ಳುವ ನೀತಿಯಾಗಿದ್ದು, ದೇಶದ ಶೇ. 30ರಷ್ಟಿರುವ ವಿದ್ಯಾರ್ಥಿ ಸಮುದಾಯದವನ್ನು ಗುರಿಯಾಗಿಸಿ ಅವರ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ನೀಡುವ ಕುತಂತ್ರ ಎಂದು ಅವರು ಹೇಳಿದರು.
ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಸಂಸದರು, ಶಾಸಕರಿಗೆ ಈ ನೀತಿಯ ಬಗ್ಗೆ ಮಾಹಿತಿಯೇ ಇಲ್ಲ. ಇನ್ನು ಅದನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ ಪ್ರಕ್ರಿಯೆ. ಈ ನಿಟ್ಟಿನಲ್ಲಿ ಎನ್‌ಎಸ್‌ಯುಐ ನೀತಿಯಲ್ಲಿರುವ ಅಪಾಯಗಳ ಕುರಿತಂತೆ ಈಗಾಗಲೇ ಸಮಾಜ ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟವನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಎನ್‌ಇಪಿ ವಿರೋಧಿ ಹೋರಾಟದ ಪ್ರಮುಖ, ಎನ್‌ಎಸ್‌ಯುಐ ಮುಖಂಡರಾದ ರಫೀಕ್ ಅಲಿ ಮಾತನಾಡಿ, ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತ ವಿರೋಧವಲ್ಲ. ಈ ನೀತಿಯನ್ನು ತಜ್ಞರ ಸಪಹೆ ಪಡೆದು, ಚರ್ಚಿಸಿ, ತಪ್ಪುಗಳನ್ನು ಸರಿಪಡಿಸಿ ಜಾರಿಗೊಳಿಸಬೇಕೆಂಬುದು ನಮ್ಮ ಆಗ್ರಹ ಎಂದರು.ಬಾಲ್ಯದ 5ರಿಂದ 7 ವರ್ಷಗಳ ಅವಧಿ ಶಿಕ್ಷಣದ ಬಗ್ಗೆ ಮಾನಸಿಕವಾಗಿ ಸಿದ್ಧತೆಯ ಅವಧಿ. ಆ ಸಂದರ್ಭ ಅವರಿಗೆ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸುವ ಬದಲು ಈ ನೀತಿಯ ಪ್ರಕಾರ ಅವರಿಗೆ ಮನಬಂದಂತೆ ಕಲಿಕೆಯ ಅವಕಾಶ ಅವರ ಭವಿಷ್ಯಕ್ಕೆ ನೀಡುವ ತೊಂದರೆಯಾಗಿದೆ. ಬೋರ್ಡ್ ಪರೀಕ್ಷೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದಿರುವುದು,ನಾಲ್ಕು ವರ್ಷಗಳ ಪದವಿ ಅವಧಿಯಲ್ಲಿ ಯಾವುದೇ ವರ್ಷದಲ್ಲಿ ಹೊರ ಹೋಗುವ ಅವಕಾಶವು ಉನ್ನತ ಶಿಕ್ಷಣದಿಂದ ಯುವ ಪೀಳಿಗೆಯನ್ನು ವಂಚಿತರನ್ನಾಗಿಸುವುದಾಗಿದೆ ಎಂದು ಅವರು ವಿಶ್ಲೇಷಿಸಿದರು.
ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಇಂದಿನಿಂದ 10 ದಿನಗಲ ಕಾಲ ಶಾಲಾ ಕಾಲೇಜುಗಳಲ್ಲಿ ಜಾಗೃತಿ, ಕರಪತ್ರ ಹಂಚುವಿಕೆಯೊಂದಿಗೆ 2 ಲಕ್ಷ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಅದನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸವದ್ ಸುಳ್ಯ ಹೇಳಿದರು.
ಗೋಷ್ಠಿಯಲ್ಲಿ ಎನ್‌ಎಸ್‌ಯುಐ ಪ್ರಮುಖರಾದ ಭರತ್ ರಾಮ್ ಗೌಡ, ಸುಹಾನ್ ಆಳ್ವ, ನವೀದ್, ಝಾಕಿರ್, ವಿನಯ್, ಝೈನ್ ಆತೂರು, ಪವನ್ ಸಾಲಿಯಾನ್, ಅಂಕುಶ್ ಶೆಟ್ಟಿ, ಬಾತಿಶ್ ಅಳಕೆಮಜಲು ಮೊದಲಾದವರು ಉಪಸ್ಥಿತರಿದ್ದರು.