ಚರ್ಮದಿಂದ ಚರ್ಮಕ್ಕೆ ಸಂಪರ್ಕ ಮಾತ್ರ ಲೈಂಗಿಕ ದೌರ್ಜನ್ಯ: ವಿವಾದಾತ್ಮಕ ಬಾಂಬೆ ಹೈಕೋರ್ಟ್ ತೀರ್ಪು ರದ್ದುಪಡಿಸಿದ ಸುಪ್ರೀಂ
ಹೊಸದಿಲ್ಲಿ,ನ.18: ಪೊಕ್ಸೊ ಕಾಯ್ದೆಯಡಿ ಅಪರಾಧವನ್ನಾಗಿ ಪರಿಗಣಿಸಲು ಚರ್ಮದಿಂದ ಚರ್ಮಕ್ಕೆ ಸಂಪರ್ಕ ಅಗತ್ಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ತೀರ್ಪು ನೀಡಿದೆ. ಚರ್ಮಕ್ಕೆ ಚರ್ಮದ ಸಂಪರ್ಕವಿಲ್ಲದೆ ಬಟ್ಟೆಯ ಮೇಲಿಂದಲೇ ಅಪ್ರಾಪ್ತವಯಸ್ಕ ಬಾಲಕಿಯ ಎದೆಯನ್ನು ತಡಕಾಡುವುದು ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ಹೇಳಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು,ಸದ್ರಿ ತೀರ್ಪನ್ನು ‘ಕಾನೂನಿನ ಸಂಕುಚಿತ ವ್ಯಾಖ್ಯಾನ ’ಎಂದು ಬಣ್ಣಿಸಿತು.
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದು ಪೊಕ್ಸೊ ಕಾಯ್ದೆಯ ಉದ್ದೇಶವಾಗಿದೆ ಎಂದು ಬೆಟ್ಟು ಮಾಡಿದ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ಆರ್.ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರ ಪೀಠವು, ಲೈಂಗಿಕ ಉದ್ದೇಶದಿಂದ ಮಾಡಿದ ದೈಹಿಕ ಸಂಪರ್ಕವು ಪೊಕ್ಸೊ ಕಾಯ್ದೆಯಡಿ ಬರುತ್ತದೆ ಮತ್ತು ಚರ್ಮದಿಂದ ಚರ್ಮಕ್ಕೆ ಸಂಪರ್ಕವು ಮಾನದಂಡವಾಗುವುದಿಲ್ಲ ಎಂದು ಹೇಳಿತು.
ಬಾಂಬೆ ಉಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸಿದ್ದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು, ನ್ಯಾಯಾಲಯದ ವ್ಯಾಖ್ಯಾನವು ಯಾರೇ ಆದರೂ ಸರ್ಜಿಕಲ್ ಗ್ಲೋವ್‌ಗಳನ್ನು ಧರಿಸಿ ಮಗುವನ್ನು ಲೈಂಗಿಕವಾಗಿ ಶೋಷಿಸಬಹುದು ಮತ್ತು ಯಾವುದೇ ದಂಡನೆಯಿಲ್ಲದೆ ಪಾರಾಗಬಹುದು ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಪೂರ್ವನಿದರ್ಶನವಾಗಿ ಪರಿಗಣಿಸಿದರೆ ಫಲಿತಾಂಶವು ವಿನಾಶಕಾರಿಯಾಗುತ್ತದೆ ಎಂದು ವಾದಿಸಿದ್ದರು.
ಅರ್ಜಿದಾರನ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲುಥ್ರಾ ಅವರು,ಲೈಂಗಿಕ ಉದ್ದೇಶಕ್ಕೆ ದೈಹಿಕ ಸಂಪರ್ಕವು ಅಗತ್ಯವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯು ಬಾಲಕಿಯ ಬಟ್ಟೆಯನ್ನು ಸ್ಪರ್ಶಿಸಿದ್ದನೇ ಹೊರತು ಚರ್ಮವನ್ನಲ್ಲ ಎಂದು ವಾದಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಸ್ಪರ್ಶದ ವ್ಯಾಖ್ಯಾನವನ್ನು ಪ್ರಶ್ನಿಸಿದ್ದ ಸರ್ವೋಚ್ಚ ನ್ಯಾಯಲಯವು,‘ಸ್ಪರ್ಶವೆಂದರೇನು,ಸುಮ್ಮನೆ ಮುಟ್ಟುವುದೇ? ನೀವು ಬಟ್ಟೆಯ ತುಂಡನ್ನೊಂದನ್ನು ಧರಿಸಿದ್ದರೂ ಅವರು ಬಟ್ಟೆಯನ್ನು ಸ್ಪರ್ಶಿಸಲು ಪ್ರಯತ್ನಿಸುವುದಿಲ್ಲ. ಸಂಸತ್ತು ಉದ್ದೇಶಿಸಿರುವಂತೆ ಸ್ಪರ್ಶವನ್ನು ನಾವು ನೋಡಬೇಕಾಗುತ್ತದೆ ’ ಎಂದು ಹೇಳಿತ್ತು.
‘ಶಾಸಕಾಂಗವು ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ ಮತ್ತು ನ್ಯಾಯಾಲಯಗಳು ನಿಬಂಧನೆಯಲ್ಲಿ ಅಸ್ಪಷ್ಟತೆಯನ್ನು ಸೃಷ್ಟಿಸಬಾರದು ಎನ್ನುವುದನ್ನು ನಾವು ಎತ್ತಿ ಹಿಡಿದಿದ್ದೇವೆ. ಅಸ್ಪಷ್ಟತೆಯನ್ನು ಸೃಷ್ಟಿಸುವಲ್ಲಿ ನ್ಯಾಯಾಲಯಗಳು ಅತ್ಯುತ್ಸಾಹಿಗಳಾಗಬಾರದು ’ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತು.