×
Ad

‘ಮಾಮ್ ಇನ್‌ಸ್ಪೈರ್ ಅವಾರ್ಡ್’ಗೆ ಮೂವರು ವಿದ್ಯಾರ್ಥಿನಿಯರ ಆಯ್ಕೆ

Update: 2021-11-18 20:01 IST

ಮಂಗಳೂರು, ನ.18: ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿದ್ಯಾರ್ಥಿ ಹಂತದಲ್ಲಿ ಅತ್ಯುತ್ತಮ ಕೊಡುಗೆ ನೀಡಿರುವ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್(ಮಾಮ್) ಆಫ್ ಮಂಗಳಗಂಗೋತ್ರಿ ಸಂಘಟನೆಯ ವತಿಯಿಂದ ನೀಡಲಾಗುವ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ಗೆ ಶ್ರೀರಕ್ಷಾ ರಾವ್ ಪುನರೂರು ಮತ್ತು ದುರ್ಗಾ ಪ್ರಸನ್ನ ಹಾಗೂ ಪ್ರಜ್ಞಾ ಒಡಿಲ್ನಾಳ ಆಯ್ಕೆಯಾಗಿದ್ದಾರೆ.

ಸ್ನಾತಕೋತ್ತರ ಪದವಿ ವಿಭಾಗದ ಶ್ರೀರಕ್ಷಾ ರಾವ್ ಪುನರೂರು ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಉತ್ತಮ ಬರಹಗಾರಿಕೆ ಮೂಲಕ ಗುರುತಿಸಿಕೊಂಡವರು. ಆಳ್ವಾಸ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ದತ್ತು ಸ್ವೀಕಾರ ಯೋಜನೆಯಡಿ ಪತ್ರಿಕೋದ್ಯಮ ಕೋರ್ಸ್‌ಗೆ ಆಯ್ಕೆಯಾಗಿದ್ದರು. ಆಳ್ವಾಸ್ ರಂಗ ಅಧ್ಯಯನದ ವಿದ್ಯಾರ್ಥಿನಿಯಾಗಿರುವ ಶ್ರೀರಕ್ಷಾ ರಾವ್ ಚಂಡೀಘಡದಲ್ಲಿ 2019ರಲ್ಲಿ ನಡೆದ ರಾಷ್ಟ್ರ ಮಟ್ಟದ ಯುವ ಜನೋತ್ಸವದಲ್ಲಿ ಭಾಗವಹಿಸಿ ನಾಟಕದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಬೀದಿ ನಾಟಕ, ತುಳು, ಕನ್ನಡ ನಾಟಕಗಳಲ್ಲಿ ಅಭಿನಯಿಸಿ ದವರು. ಇದೀಗ ಬೆಂಗಳೂರಿನ ಮಸ್ತ್ ಮಗಾ ಡಾಟ್ ಕಾಂ ಡಿಜಿಟಲ್ ಮಾಧ್ಯಮದಲ್ಲಿ ನಿರೂಪಕಿಯಾಗಿದ್ದಾರೆ.

ಪದವಿ ವಿಭಾಗದ ದುರ್ಗಾ ಪ್ರಸನ್ನ ಕಾಸರಗೋಡು ಜಿಲ್ಲೆಯ ಪೆರ್ಲದವರು. ಪ್ರಸ್ತುತ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಪದವಿ ವಿದ್ಯಾಭ್ಯಾಸವನ್ನು ಆಳ್ವಾಸ್‌ನಲ್ಲಿಯೇ ಪೂರೈಸಿದ್ದಾರೆ.ವಿವಿಧ ಪತ್ರಿಕೆಗಳಲ್ಲಿ 60ಕ್ಕೂ ಅಧಿಕ ಲೇಖನ ಬರೆದಿದ್ದಾರೆ. ಕನ್ನಡ ಹಾಗೂ ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕಿ ಹಾಗೂ ತರಬೇತುದಾರರಾಗಿದ್ದಾರೆ. ಸುದ್ದಿವಾಣಿ ವೆಬ್‌ಸೈಟ್‌ನ ಸಂಪಾದಕಿಯಾಗಿದ್ದಾರೆ.

ಪ್ರಜ್ಞಾ ಓಡಿಲ್ನಾಳ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದರು. ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪದವಿ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ. ಪುತ್ತೂರಿನ ಸ್ಥಳೀಯ ವಾಹಿನಿ ಝೂಮ್ ಇನ್ ಟಿವಿಯಲ್ಲಿ ನಿರೂಪಕಿ ಹಾಗೂ ವರದಿಗಾರ್ತಿ. ನಿರೂಪಕಿ, ಬರಹಗಾರ್ತಿಯಾಗಿ ಗುರುತಿಸಿಕೊಂಡವರು.

ನ.22ರಂದು ಬೆಳಗ್ಗೆ 10:30ಕ್ಕೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಪ್ರಶಸ್ತಿ ಪ್ರದಾನ ಮಾಡಲಿದ್ದು, ಅತಿಥಿಯಾಗಿ ಪತ್ರಕರ್ತ ಗುರುವಪ್ಪಎನ್.ಟಿ.ಬಾಳೇಪುಣಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News