ಬೀದಿ ಬದಿ ವ್ಯಾಪಾರಸ್ಥರ ಎತ್ತಂಗಡಿಗ ಪಾಲಿಕೆ ಹುನ್ನಾರ: ಡಿವೈಎಫ್‌ಐ ವಿರೋಧ
ಮಂಗಳೂರು, ನ.18: ಮಂಗಳೂರು ಮಹಾನಗರ ಪಾಲಿಕೆಯು ವಾಮಂಜೂರು ಪರಿಸರದ ಬೀದಿಬದಿ ವ್ಯಾಪಾರಸ್ಥರ ತೆರವಿಗೆ ನೋಟೀಸ್ ನೀಡಿ ನ.20ರೊಳಗೆ ತೆರವುಗೊಳಿಸಲು ಆದೇಶ ಹೊರಡಿಸಿರುವುದನ್ನು ಡಿವೈಎಫ್‌ಐ ವಾಮಂಜೂರು ಘಟಕವು ಸಮಿತಿ ತೀವ್ರವಾಗಿ ವಿರೋಧಿಸಿದೆ.
ಇಂದು ಬೀದಿ ಬದಿ ವ್ಯಾಪಾರಸ್ಥರ ಬದುಕಿಗೆ ಪೂರಕವಾಗಿ ಹಲವಾರು ನಿಯಮಗಳು ಜಾರಿಯಲ್ಲಿದ್ದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಪಾಲಿಕೆ ಆಡಳಿತವು ಏಕಾಏಕಿ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲು ಮುಂದಾಗಿರುವುದು ಸರಿಯಾದ ಧೋರಣೆಯಲ್ಲ. ಈಗಾಗಲೇ ಕೊರೋನ ಸಂಕಷ್ಟದ ಕಾಲದಲ್ಲಿ ಬಡಪಾಯಿ ಬೀದಿಬದಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಲಾಕ್‌ಡೌನ್ ಬಳಿಕ ವ್ಯಾಪಾರ ನಡೆಸಲು ಈಗಷ್ಟೇ ಅವಕಾಶ ಸಿಕ್ಕಿ ಕುಟುಂಬ ನಿರ್ವಹಣೆ ನಡೆಸಲು ಪ್ರಾರಂಭಿಸಿದಾಗಲೇ ಪಾಲಿಕೆ ಆಡಳಿತವು ಏಕಾಏಕಿಯಾಗಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ. ಯಾವ ಕಾರಣಕ್ಕೂ ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಬಾರದು. ಒಂದು ವೇಳೆ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಡಿವೈಎಫ್‌ಐ ವಾಮಂಜೂರು ಪ್ರದೇಶ ಸಮಿತಿಯ ಮುಖಂಡ ಮನೋಜ್ ವಾಮಂಜೂರು ತಿಳಿಸಿದ್ದಾರೆ.