ಜಮ್ಮು ಕಾಶ್ಮೀರ ಎನ್ ಕೌಂಟರ್: ಐವರು ಶಂಕಿತ ಉಗ್ರರು ಸಾವು

Update: 2021-11-18 14:58 GMT

ಶ್ರೀನಗರ, ನ. 17: ಜಮ್ಮು ಹಾಗೂ ಕಾಶ್ಮೀರದ ಕುಲ್ಗಾಂವ್ ನಲ್ಲಿ ಭದ್ರತಾ ಪಡೆ ನಡೆಸಿದ ಅವಳಿ ಎನ್‌ಕೌಂಟರ್‌ನಲ್ಲಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ)ನ ಜಿಲ್ಲಾ ಕಮಾಂಡರ್ ಸೇರಿದಂತೆ ಐವರು ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಗೋಪಾಲಪೋರ ಹಾಗೂ ಪೋಂಬೆ ಪ್ರದೇಶಗಳಲ್ಲಿ ಬುಧವಾರ ಈ ಎನ್‌ಕೌಂಟರ್‌ ನಡೆಯಿತು. 

ಕಾರ್ಯಾಚರಣೆ ಸಂದರ್ಭ ಪೋಂಬೆಯಲ್ಲಿ ಮೂವರು ಶಂಕಿತ ಉಗ್ರರು ಹಾಗೂ ಗೋಪಾಲಪೋರದಲ್ಲಿ ಇಬ್ಬರು ಶಂಕಿತ ಉಗ್ರರು ಹತರಾಗಿದ್ದಾರೆ. ‘‘ಪೋಂಬೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 2018ರಿಂದ ಸಕ್ರಿಯನಾಗಿದ್ದ ಶಂಕಿತ ಕುಖ್ಯಾತ ಉಗ್ರ ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ನ ಜಿಲ್ಲಾ ಕಮಾಂಡರ್ ಶಾಕಿರ್ ನಝರ್‌ನೊಂದಿಗೆ ಇತರ ಇಬ್ಬರು ಉಗ್ರರು ಹತರಾಗಿದ್ದಾರೆ. ಇದು ಅತಿ ದೊಡ್ಡ ಯಶಸ್ಸು’’ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. 

ಗೋಲಪೋರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಇಬ್ಬರು ಉಗ್ರರಲ್ಲಿ ಟಿಆರ್‌ಎಫ್‌ನ ಜಿಲ್ಲಾ ಕಮಾಂಡರ್ ಅಫಖ್ ಸಿಖಂದರ್ ಸೇರಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೋಂಬೆ ಹಾಗೂ ಗೋಪಾಲಪೋರದ ಗ್ರಾಮಗಳಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರ ಜಿಲ್ಲೆಯಲ್ಲಿ ಬುಧವಾರ ಅವಳಿ ಕಾರ್ಯಾಚರಣೆ ನಡೆಸಿತು. ‘‘ಎರಡೂ ಕಾರ್ಯಾಚರಣೆ ಸಂದರ್ಭ ಸಿಕ್ಕಿ ಬಿದ್ದ ಉಗ್ರರಿಗೆ ಶರಣಾಗತರಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ, ಅವರು ಶೋಧ ಕಾರ್ಯಾಚರಣೆ ತಂಡದ ಮೇಲೆ ವಿವೇಚನಾ ರಹಿತವಾಗಿ ಗುಂಡು ಹಾರಿಸಿದರು. ಭದ್ರತಾ ಪಡೆ ಪ್ರತಿ ದಾಳಿ ನಡೆಸಿತು’’ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News