ಶಂಕರಪುರ ಮಲ್ಲಿಗೆ ಮಾರಾಟಕ್ಕೆ ಮೊಬೈಲ್ ಆ್ಯಪ್ ಆವಿಷ್ಕಾರ
ಉಡುಪಿ, ನ.18: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದ ಗಣಕ ಯಂತ್ರ ವಿಭಾಗದ ವಿದ್ಯಾರ್ಥಿಗಳು ಶಂಕರಪುರ ಮಲ್ಲಿಗೆ ಮಾರಾಟಕ್ಕೆ ಅನುಕೂಲವಾಗುವ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದ್ದು ಇದರಿಂದ ಮಲ್ಲಿಗೆ ಖರೀದಿಸುವ ಗ್ರಾಹಕರಿಗೆ ಹಾಗೂ ಮಲ್ಲಿಗೆ ಬೆಳೆಗಾರರಿಗೆ ಅನುಕೂಲವಾಗಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಮಲ್ಲಿಗೆಯ ದರ ವಿಪರೀತ ಹೆಚ್ಚಾಗಿದ್ದರೂ, ಅದರ ಬೆಳೆಗಾರರಿಗೆ ಹೆಚ್ಚಾದ ಬೆಲೆಯ ಲಾಭ ಸಿಗುತ್ತಿರಲಿಲ್ಲ. ಅದೇ ರೀತಿ ಅತ್ಯಧಿಕ ಬೆಲೆಗೆ ಮಲ್ಲಿಗೆಯನ್ನು ಕೊಂಡುಕೊಂಡ ಗ್ರಾಹಕನಿಗೆ ದರಕ್ಕೆ ಸೂಕ್ತವಾದ ಪ್ರಮಾಣದ ಮಲ್ಲಿಗೆ ಸಿಗುತ್ತಿರಲಿಲ್ಲ. (ಶಂಕರಪುರದಲ್ಲಿ ಸಿಗುವ ಒಂದು ಚೆಂಡು ಮಲ್ಲಿಗೆಯ ಪ್ರಮಾಣಕ್ಕಿಂತ ಇತರ ಸ್ಥಳಗಳಲ್ಲಿ ಸಿಗುವ ಒಂದು ಚೆಂಡು ಮಲ್ಲಿಗೆಯ ಪ್ರಮಾಣ ಕಡಿಮೆ ಎನ್ನುವುದು ಹೆಚ್ಚಿನ ಗ್ರಾಹಕರು ಅನುಭವಿಸಿರುವ ಕಟು ಸತ್ಯ)
ಮಲ್ಲಿಗೆ ಮಾರಾಟ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಪ್ರಭಾವದಿಂದ ಬೆಳೆಗಾರ ಹಾಗೂ ಗ್ರಾಹಕ ಇಬ್ಬರಿಗೂ ನಷ್ಟವಾಗುತ್ತಿತ್ತು. ಬಂಟಕಲ್‌ನ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿರುವ ಈ ಆ್ಯಪ್ ಅನ್ನು ಕೃಷಿಕರೇ ನಿರ್ವಹಿಸಬಹುದಾಗಿದ್ದು, ಆಯ್ದ ಸ್ಥಳಗಳಲ್ಲಿ ಇವರೇ ಮಲ್ಲಿಗೆ ಮಾರಾಟ ಮಳಿಗೆಗಳನ್ನು ತೆರೆದು ಅಥವಾ ಪ್ರಸ್ತುತ ಇರುವ ಹೂ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಲ್ಲಿ, ಗ್ರಾಹಕನಿಗೆ ಸರಿಯಾದ ಪ್ರಮಾಣದ ಹೂವನ್ನು ಕೊಡಬಹುದು.
ಇದರಿಂದ ಕೊಟ್ಟ ಹಣಕ್ಕೆ ಸರಿಯಾದ ಪ್ರಮಾಣದ ಹೂವನ್ನು ಪಡೆದ ಸಂತೃಪ್ತಿ ಗ್ರಾಹಕನಿಗೆ ಸಿಕ್ಕಿದರೆ, ಬೆಳೆದ ಬೆಳೆಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ಸೂಕ್ತ ಬೆಲೆ ಸಿಕ್ಕಿದ ಸಮಾಧಾನ ಮಲ್ಲಿಗೆ ಕೃಷಿಕರಿಗೆ ಸಿಗಲಿದೆ. ಅಲ್ಲದೇ, ಕೃಷಿಕರೇ ಮಾರಾಟ ಮಳಿಗೆಯನ್ನು ತೆರೆಯುವ ಮೂಲಕ, ಅಥವಾ ಗ್ರಾಹಕರ ಮನೆ ಬಾಗಿಲಿಗೆ ಹೂವನ್ನು ತಲುಪಿಸುವ ಮೂಲಕ ಸ್ವಉದ್ಯೋಗಕ್ಕೂ ಅವಕಾಶಗಳಿವೆ.
ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಭಿದೇವ್ ವಿ., ದೀಪಿತ್, ಜಿತೇಶ್ ಶೆಣೈ ಮತ್ತು ಮುಹಮ್ಮದ್ ಸಾಹಿಲ್ ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ವೇಣುಗೋಪಾಲ ರಾವ್ ಮಾರ್ಗದರ್ಶನದಲ್ಲಿ ಈ ಆ್ಯಪ್ ಅನ್ನು ಸಿದ್ಧಪಡಿಸಿದ್ದು ಇದರ ಮೂಲಕ ಕೇವಲ ಮಲ್ಲಿಗೆ ಮಾತ್ರವಲ್ಲದೆ, ಮಟ್ಟುಗುಳ್ಳವೇ ಮುಂತಾದ ಸ್ಥಳೀಯ ವಸ್ತುಗಳಿಗೂ ವಿಸ್ತರಿಸಬಹುದು ಎಂದು ಪ್ರಕಟಣೆ ತಿಳಿಸಿದೆ.