ಮಂಗಳೂರು; ಗಾಂಜಾ ಸೇವನೆ ಆರೋಪ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಿತ 6 ಮಂದಿ ಸೆರೆ
ಮಂಗಳೂರು, ನ.18: ನಗರದ ಬಿಜೈ ಕಾಪಿಕಾಡ್ ಮತ್ತು ಕೊಟ್ಟಾರ ಕಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಹಿತ 6 ಮಂದಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ರುತಿನ್ (20), ಹರಿಕೃಷ್ಣನ್ ಕೆ.ಆರ್.(22), ಆಕಾಶ್ ಕೆ.(19), ಅಕ್ಷಯ್ (20), ಮಾರ್ಟಿನ್ (20), ವಸಂತ್ ಕುಮಾರ್ (45) ಬಂಧಿತ ಆರೋಪಿಗಳು.
ಪ್ರಕರಣ 1: ಗುರುವಾರ ಮುಂಜಾನೆ ಸುಮಾರು 4 ಗಂಟೆಗೆ ಉರ್ವ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕಾಪಿಕಾಡ್ ಬಳಿ ರುತಿನ್, ಹರಿಕೃಷ್ಣನ್, ಆಕಾಶ್, ಅಕ್ಷಯ್, ಮಾರ್ಟಿನ್ ಎಂಬವರು ಸೇರಿ ಸಿಗರೇಟನ್ನು ಸೇದುತ್ತಿರುವುದು ಕಂಡು ಬಂದಿತ್ತು. ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಸಾಬೀತಾಯಿತು. ಈ ಆರೋಪಿಗಳೆಲ್ಲರೂ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಪ್ರಕರಣ 2: ನ.16ರಂದು ಉರ್ವ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕೊಟ್ಟಾರ ಕ್ರಾಸ್ ಬಳಿ ದೇರೆಬೈಲ್ ದಡ್ಡಲ್ ಕಾಡ್ ನಿವಾಸಿ ವಸಂತ್ ಕುಮಾರ್ ಎಂಬಾತ ಸಿಗರೇಟ್‌ನೊಂದಿಗೆ ಗಾಂಜಾ ಸೇವನೆ ಮಾಡುತ್ತಿದ್ದ. ಈತನನ್ನು ವಶಕ್ಕೆ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.