×
Ad

ಮನಪಾ ಆರೋಗ್ಯ ಇಲಾಖೆ ಹೆಸರಿನಲ್ಲಿ ವಂಚನೆ: ಪರಿಶೀಲನೆಯ ನೆಪದಲ್ಲಿ ಮನೆಗೆ ನುಗ್ಗಿ ನಗ-ನಗದು ದೋಚಿದ ಯುವಕರು

Update: 2021-11-18 21:51 IST

ಮಂಗಳೂರು, ನ.18: ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಂದು ತಂಡವೊಂದು ಮಹಿಳೆಯನ್ನು ವಂಚಿಸಿದ ಘಟನೆ ಮಂಗಳವಾರ ನಡೆದಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ದಡ್ಡಲ್‌ ಕಾಡ್ ನಿವಾಸಿ ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10:30ಗಂಟೆ ಇಬ್ಬರು ಅಪರಿಚಿತರು ಆಗಮಿಸಿ, 'ನಾವು ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು. ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ' ಎಂದಿದ್ದಾರೆ. ಬಳಿಕ ನೀರಿನ ಸಂಪ್ ಚೆಕ್ ಮಾಡಬೇಕು ಎಂದು ಹೇಳಿದ್ದಾರೆ. ಹಾಗೇ ಆ ಮನೆಯ ಟೆರಸಿಗೂ ತೆರಳಿ ನೀರಿನ ಟ್ಯಾಂಕ್ ಪರಿಶೀಲಿಸಿದ್ದಾರೆ. ಮಹಿಳೆ ಸಹಿತ ಆರೋಪಿಗಳು ಟೆರಸಿಗೆ ತೆರಳಿದಾಗ ಇನ್ನೊಬ್ಬ ಆರೋಪಿ ಆಗಮಿಸಿ ನೇರವಾಗಿ ಮನೆಗೆ ಪ್ರವೇಶಿಸಿದ. ಅಲ್ಲದೆ ಕಪಾಟಿನಲ್ಲೇ ನೇತು ಹಾಕಲಾಗಿದ್ದ ಕೀ ಮೂಲಕ ಬಾಗಿಲು ತೆರೆದು 68 ಗ್ರಾಂ ಚಿನ್ನಾಭರಣ ಮತ್ತು 71 ಸಾವಿರ ರೂ. ನಗದು ದೋಚಿದ್ದಾರೆ ಎನ್ನಲಾಗಿದ್ದು, ಟೆರೇಸಿನಲ್ಲಿದ್ದ ಮಹಿಳೆ ಮನೆಯೊಳಗೆ ಹೋದ ಬಳಿಕ ಕಳವು ಕೃತ್ಯ ಬಯಲಾಗಿದೆ.

ಈ ಮಧ್ಯೆ ಆರೋಗ್ಯ ಇಲಾಖೆ ಸಿಬ್ಬಂದಿ ಎಂದು ಹೇಳಿ ಬಂದವರ ಬಗ್ಗೆ ಸ್ಥಳೀಯರಿಗೆ ಅನುಮಾನ ಬಂದಿದೆ. ಅದರಂತೆ ನೀವು ಮಹಾನಗರ ಪಾಲಿಕೆಯ ಸಿಬ್ಬಂದಿ ಎಂಬುದಕ್ಕೆ ದಾಖಲೆ ಕೊಡಿ ಎಂದಾಗ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News