ಕಿನ್ನಿಗೋಳಿ: ಮಕ್ಕಳನ್ನು ರಕ್ಷಿಸಿ, ಕಣಜದ ಹುಳದ ದಾಳಿಗೆ ಬಲಿಯಾದ ಗೃಹರಕ್ಷಕ ದಳ ಸಿಬ್ಬಂದಿ

Update: 2021-11-18 17:54 GMT

ಮುಲ್ಕಿ, ನ.18: ಕಿನ್ನಿಗೋಳಿ ಸಮೀಪದ ಶ್ರೀ ರಾಮ ಮಂದಿರ ಬಳಿ ಕಣಜದ ಹುಳು ಕಡಿದು ಗೃಹರಕ್ಷಕ ದಳ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಕಟೀಲು ಬಳಿಯ ಎಕ್ಕಾರು ದೇವರಗುಡ್ಡೆ ನಿವಾಸಿ ಸಂತೋಷ್ (35) ಮೃತಪಟ್ಟವರು. ಇವರು ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿದ್ದರು.

ಸಂತೋಷ್ ಬುಧವಾರ ಸಂಜೆ ಶ್ರೀರಾಮ ಮಂದಿರ ಬಳಿ ಆಟೋದಲ್ಲಿ ಹೋಗುತ್ತಿದ್ದಾಗ ಕಣಜದ ಹುಳುಗಳ ದಾಳಿಗೊಳಗಾಗಿ ಕಿನ್ನಿಗೋಳಿ ಪರಿಸರದ ಶಾಲೆಯ ಕೆಲ ಮಕ್ಕಳು ಗಂಭೀರಾವಸ್ಥೆಯಲ್ಲಿದ್ದರು. ಇದನ್ನು ಕಂಡ ಸಂತೋಷ್ ಮಕ್ಕಳನ್ನು ಕಣಜದ ಹುಳುಗಳಿಂದ ರಕ್ಷಿಸಿ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆನ್ನಲಾಗಿದೆ.

ಮಕ್ಕಳ ರಕ್ಷಣೆಯ ಸಂದರ್ಭ ಕಣಜದ ಹುಳು ಸಂತೋಷ್ ಅವರಿಗೂ ಕಡಿದಿದ್ದು, ಆದರೆ, ಅವರು ಯಾವುದೇ ಚಿಕಿತ್ಸೆ ಪಡೆಯದೆ ಮನೆ ಕಡೆ ತೆರಳಿದ್ದರೆನ್ನಲಾಗಿದೆ. ಮನೆಯಲ್ಲಿ ರಾತ್ರಿ ಸುಮಾರು 9 ಗಂಟೆಗೆ ಕುರ್ಚಿಯಲ್ಲಿ ಕುಳಿತ್ತಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಆರು ಮಕ್ಕಳ ರಕ್ಷಣೆ ಮಾಡಿದ ಸಂತೋಷ್ ಅವರ ಕೈಂಕರ್ಯ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News