ಎಲ್ಲಾ ಸಮಸ್ಯೆಗಳಿಗೂ ರಶ್ಯಾವನ್ನು ದೂರಬೇಡಿ: ಯುರೋಪ್ ಗೆ ರಶ್ಯಾ ಕಿವಿಮಾತು

Update: 2021-11-18 18:04 GMT

ಮಾಸ್ಕೋ, ನ.18: ಯುರೋಪ್ ಎಲ್ಲಾ ಸಮಸ್ಯೆಗಳಿಗೂ ರಶ್ಯಾವನ್ನು ದೂರುವ ಬದಲು, ಇದೀಗ ಯುರೋಪ್‌ನಲ್ಲಿ ಉಲ್ಬಣಗೊಂಡಿರುವ ಸಮಸ್ಯೆಗಳ ಮೂಲದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದು ರಶ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ಉಕ್ರೇನ್ ಗಡಿಭಾಗದಲ್ಲಿ ಹಾಗೂ ಯುರೋಪಿಯನ್ ಯೂನಿಯನ್ ಸದಸ್ಯ ಪೋಲಂಡ್ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಗೆ ಮುಂದಾಗದಂತೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ನೀಡಿರುವ ಎಚ್ಚರಿಕೆಗೆ ಪೆಸ್ಕೋವ್ ಪ್ರತಿಕ್ರಿಯೆ ನೀಡುತ್ತಿದ್ದರು. ‘ರಶ್ಯಾವು ಯಾವುದೇ ಹೈಬ್ರಿಡ್ ಯುದ್ಧದಲ್ಲಿ ತೊಡಗಿಲ್ಲ. ಎಲ್ಲಾ ಸಮಸ್ಯೆಗೂ ರಶ್ಯಾವನ್ನು ದೂಷಿಸುವುದು ಸರಿಯಲ್ಲ ಎಂಬ ಪ್ರಜ್ಞೆಯನ್ನು ಯುರೋಪ್ನ ಪ್ರತಿಯೊಬ್ಬರೂ ಬೆಳೆಸಿಕೊಳ್ಳುತ್ತಾರೆ ಎಂಬುದು ನಮ್ಮ ಆಶಯವಾಗಿದೆ. 

ಇತ್ತೀಚೆಗೆ ಬ್ರಿಟನ್‌ನಲ್ಲಿ  ಹಲವು ಉನ್ಮಾದದ ಹೇಳಿಕೆ, ಪ್ರಕಟಣೆಗಳನ್ನು ಗಮನಿಸಿದ್ದೇವೆ ’ ಎಂದು ಪೆಸ್ಕೋವ್ ಹೇಳಿದ್ದಾರೆ. 2014ರಿಂದ ಉಕ್ರೇನ್ ನ ಪೂರ್ವಭಾಗದಲ್ಲಿ ರಶ್ಯಾ ಪರವಾಗಿರುವ ಪ್ರತ್ಯೇಕತಾವಾದಿಗಳು ಹಾಗೂ ಉಕ್ರೇನ್ ಸರಕಾರಿ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಇತ್ತೀಚೆಗೆ ರಶ್ಯಾವು ಉಕ್ರೇನ್ ಗಡಿಭಾಗದಲ್ಲಿ ತನ್ನ ಸೇನೆಯನ್ನು ಜಮಾವಣೆಗೊಳಿಸಿದೆ. ಇದನ್ನು ನೇಟೋ ದೇಶಗಳು ಹಾಗೂ ಪಶ್ಚಿಮದ ದೇಶಗಳು ತೀವ್ರವಾಗಿ ಖಂಡಿಸಿವೆ.
 
ಈ ಮಧ್ಯೆ, ತನ್ನ ಗಡಿಭಾಗದಲ್ಲಿ ರಶ್ಯಾದ ಸೇನೆಯ ಉಪಸ್ಥಿತಿಯನ್ನು ಖಂಡಿಸಿರುವ ಉಕ್ರೇನ್, ಪಾಶ್ಚಿಮಾತ್ಯ ದೇಶಗಳಿಂದ ಸೇನಾ ನೆರವು ಯಾಚಿಸಿದೆ. ರಶ್ಯಾದ ಆಕ್ರಮಣಕಾರಿ ಉಪಕ್ರಮಗಳು ಹೆಚ್ಚುತ್ತಿವೆ. ಪಾಶ್ಚಿಮಾತ್ಯ ದೇಶಗಳು ಹೆಚ್ಚುವರಿ ಶಸ್ತ್ರಾಸ್ತ್ರ ಒದಗಿಸಬೇಕು ಎಂದು ಉಕ್ರೇನ್ನ ವಿದೇಶ ವ್ಯವಹಾರ ಸಚಿವ ಡಿಮಿಟ್ರೊ ಕ್ಯುಲೆಬಾ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News