×
Ad

ದ.ಕ.-ಕಾಸರಗೋಡು ಅಂತಾರಾಜ್ಯ ಬಸ್ ಸಂಚಾರ ಪುನಾರಂಭ

Update: 2021-11-19 10:27 IST

ಮಂಗಳೂರು/ಸುಳ್ಯ, ನ.19: ಕೋವಿಡ್-19 ಹಾವಳಿ ಉಲ್ಬಣಗೊಂಡಿದ್ದರಿಂದ ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ದ.ಕ. - ಕಾಸರಗೋಡು ಅಂತಾರಾಜ್ಯ ಬಸ್ ಸಂಚಾರ ಶುಕ್ರವಾರ ಬೆಳಗ್ಗೆಯಿಂದ ಪುನಾರಂಭಗೊಂಡಿದೆ.

ಮಂಗಳೂರು – ಕಾಸರಗೋಡು ರೂಟ್‌ನಲ್ಲಿ ಸರಕಾರಿ ಬಸ್ ಸಂಚಾರ ಶುಕ್ರವಾರ ಬೆಳಗ್ಗಿನಿಂದ ಆರಂಭವಾಗಿದೆ. ಕರ್ನಾಟಕ ಮತ್ತು ಕೇರಳದ ತಲಾ 25 ಬಸ್‌ಗಳು ಸಂಚಾರ ಆರಂಭಿಸಿದ್ದು, ಶನಿವಾರದಿಂದ ಎಲ್ಲಾ ಬಸ್‌ಗಳು ಓಡಾಟ ನಡೆಸಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ಬಸ್‌ಗಳು ಲಾಕ್‌ಡೌನ್ ತೆರವು ಬಳಿಕ‌ ತಲಪಾಡಿ ಗಡಿಯವರೆಗೆ ಮಾತ್ರ ಸಂಚರಿಸುತ್ತಿದ್ದವು. ಇದೀಗ ಮಂಗಳೂರಿನಿಂದ ಕಾಸರಗೋಡುವರೆಗೆ ಮತ್ತು ಕಾಸರಗೋಡಿನಿಂದ ಮಂಗಳೂರುವರೆಗೆ ಸಂಚರಿಸಲು ಆರಂಭಿಸಿದೆ.

ಸುಳ್ಯ: ಸುಳ್ಯ-ಕಾಸರಗೋಡು ಮಧ್ಯೆ ಬಸ್ ಸಂಚಾರ ಆರಂಭಗೊಂಡಿದ್ದು, ಇಂದು ಬೆಳಗ್ಗೆ ಕಾಸರಗೋಡನಿಂದ ಕೇರಳ ಸರಕಾರಿ ಬಸ್ ಗಳು ಸುಳ್ಯಕ್ಕೆ ಆಗಮಿಸಿವೆ. ಕೋವಿಡ್ ಹರಡುವಿಕೆಯ ಹಿನ್ನಲೆಯಲ್ಲಿ ಕಳೆದ 6-7 ತಿಂಗಳಿನಿಂದ ಅಂತಾರಾಜ್ಯ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯದಲ್ಲಿ ಕೆಲವು ದಿನಗಳ ಸುಳ್ಯದವರೆಗೆ ಬಸ್ ಸಂಚಾರ ಆರಂಭವಾಗಿದ್ದರೂ ಕೋವಿಡ್ ಪಾಸಿಟಿವ್ ಸಂಖ್ಯೆ ಏರಿದ ಹಿನ್ನೆಲೆಯಲ್ಲಿ ಮತ್ತೆ‌ ಸ್ಥಗಿತಗೊಂಡಿತ್ತು. ಇದೀಗ ಕಾಸರಗೋಡು ಡಿಪ್ಪೋದಿಂದ ಸುಳ್ಯ ಮತ್ತು ಪುತ್ತೂರಿಗೆ ಬಸ್ ಕೆಎಸ್ಸಾರ್ಟಿಸಿ ಪ್ರಯಾಣ ಆರಂಭಿಸುವುದಾಗಿ ತಿಳಿಸಿದ್ದು, ಅದರಂತೆ ಇಂದು ಬೆಳಗ್ಗೆ ಕಾಸರಗೋಡಿನಿಂದ ಸುಳ್ಯಕ್ಕೆ ಬಸ್ ಬಂದಿದೆ.

ಕಳೆದ ಕೆಲವು ತಿಂಗಳಿನಿಂದ ಅಂತಾರಾಜ್ಯ ರಸ್ತೆಯಲ್ಲಿ ಕಾಸರಗೋಡಿನಿಂದ ಪಂಜಿಕಲ್ಲು ಗಡಿಯವರೆಗೆ ಮಾತ್ರ ಸರಕಾರಿ ಬಸ್ ಪ್ರಯಾಣ ನಡೆಸಿತ್ತು. ಇದು ಅಂತಾರಾಜ್ಯ ಪ್ರಯಾಣಿಕರಿಗೆ ಪ್ರಯಾಣಕ್ಕೆ ಸಂಕಷ್ಟ ಉಂಟು ಮಾಡಿತ್ತು. ಇದೀಗ ಸುಳ್ಯದವರೆಗೆ ಬಸ್ ಬರಲು ಆರಂಭಿಸಿರುವುದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News