ವಿದ್ಯುತ್ ತಿದ್ದುಪಡಿ ಕಾನೂನು ಕೂಡ ರದ್ದಾಗಬೇಕು, ರೈತರಿಗೆ ಬೆಂಬಲ ಬೆಲೆ ಖಾತರಿಯಾಗಬೇಕು : ಸಂಯುಕ್ತ ಕಿಸಾನ್ ಮೋರ್ಚಾ
ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ವಿವಾದಿತ ಕರಾಳ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಅದರ ಪೂರ್ಣ ಪಠ್ಯ ಇಂತಿದೆ.
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 2020 ರಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲಾದ ಮೂರು ರೈತ-ವಿರೋಧಿ, ಕಾರ್ಪೊರೇಟ್ ಪರ ಕರಾಳ ಕಾನೂನುಗಳನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರವನ್ನು ಗುರುನಾನಕ್ ಜಯಂತಿ ಯಂದು ಘೋಷಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಮತ್ತು ಅಧಿಕೃತವಾಗಿ ಸಂಸತ್ತಿನ ಕಾರ್ಯಕಲಾಪಗಳ ಮೂಲಕ ಶಾಸನವಾಗಿ ಜಾರಿಯಾಗುವ ಘೋಷಣೆಗಾಗಿ ಕಾಯುತ್ತದೆ. ಈ ಘೋಷಣೆ ಅಧಿಕೃತವಾದರೆ ಭಾರತದಲ್ಲಿ ಒಂದು ವರ್ಷದ ನಿರಂತರ ರೈತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಗೆಲುವಾಗುತ್ತದೆ. ಆದರೆ, ಈ ಹೋರಾಟದಲ್ಲಿ ಸುಮಾರು 700 ರೈತರು ಹುತಾತ್ಮರಾಗಿದ್ದಾರೆ. ಲಖೀಂಪುರ ಖೇರಿಯಲ್ಲಿ ನಡೆದ ಕೊಲೆಗಳೂ ಸೇರಿದಂತೆ ಸರಕಾರದ ಮದ್ಯಪ್ರವೇಶದಿಂದ ತಪ್ಪಿಸಬಹುದಾಗಿದ್ದ ಸಾವುಗಳಿಗೆ ಕೇಂದ್ರ ಸರ್ಕಾರದ ಹಠಮಾರಿತನವೇ ಕಾರಣವಾಗಿದೆ. ಹಾಗಾಗಿ ಈ ಸಾವುಗಳ ಹೊಣೆಯನ್ನು ಕೇಂದ್ರ ಸರಕಾರವೇ ಹೊರಬೇಕಾಗಿದೆ.
ಸಂಯುಕ್ತ ಕಿಸಾನ್ ಮೋರ್ಚದ ರೈತರ ಆಂದೋಲನವು ಮಾನ್ಯ ಪ್ರಧಾನಿಯವರಿಗೆ ನೆನಪಿಸುವುದೇನೆಂದರೆ, ಈ ಮೂರು ಕರಾಳ ಕಾನೂನುಗಳನ್ನು ರದ್ದುಗೊಳಿಸುವುದಕ್ಕಾಗಿ ಮಾತ್ರ ಆಂದೋಲನ ಸೀಮಿತವಾಗಿಲ್ಲ, ಬದಲಾಗಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಮತ್ತು ಎಲ್ಲಾ ರೈತರಿಗೆ ಲಾಭದಾಯಕ ಬೆಲೆಗಳ ಶಾಸನಬದ್ಧ ಖಾತರಿಗಾಗಿ ನಮ್ಮ ಹೋರಾಟ ಕಟಿಬದ್ಧವಾಗಿದೆ.
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವುದನ್ನೂ ಒಳಗೊಂಡಂತೆ ರೈತರ ಇನ್ನುಳಿದ ಮಹತ್ವದ ಬೇಡಿಕೆಗಳು ಇನ್ನೂ ಬಾಕಿ ಇವೆ. ಹಾಗೆಯೇ ಎಸ್ಕೆಎಂ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ, ಶೀಘ್ರದಲ್ಲೇ ತನ್ನ ಸಭೆಯನ್ನು ನಡೆಸಿ ಮುಂದಿನ ನಿರ್ಧಾರಗಳನ್ನು ಪ್ರಕಟಿಸುತ್ತದೆ.
ರೈತ ಹೋರಾಟದ ಪರವಾಗಿ..
ಬಲ್ಬೀರ್ ಸಿಂಗ್ ರಾಜೇವಾಲ್, ಡಾ ದರ್ಶನ್ ಪಾಲ್, ಗುರ್ನಮ್ ಸಿಂಗ್ ಚಾರುಣಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರನ್, ಶಿವಕುಮಾರ್ ಶರ್ಮಾ 'ಕಕ್ಕಾಜಿ', ಯುದ್ವೀರ್ ಸಿಂಗ್