ತಮಿಳುನಾಡಿನ ವೆಲ್ಲೂರಿನಲ್ಲಿ ಗೋಡೆ ಕುಸಿದು 4 ಮಕ್ಕಳು ಸೇರಿದಂತೆ 9 ಮಂದಿ ಸಾವು
ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು India Today ವರದಿ ಮಾಡಿದೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಘಟನೆ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೆರ್ನಂಪಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏತನ್ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಘಟನೆಯಲ್ಲಿ ಸಾವನ್ನಪ್ಪಿದ ಒಂಬತ್ತು ಜನರ ಕುಟುಂಬಗಳಿಗೆ 5 ಲಕ್ಷ ರೂ.,ಗಾಯಗೊಂಡವರಿಗೆ 50,000 ರೂಪಾಯಿ ನೀಡಲಾಗುವುದು ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರವೂ ತಮಿಳುನಾಡಿನ ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಚೆನ್ನೈ ಮತ್ತು ಅದರ ಹತ್ತಿರದ ಜಿಲ್ಲೆಗಳು ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು.