ಕಾಫಿ ಹೌಸ್‌ ನಡೆಸುತ್ತಾ, ಉಳಿತಾಯದ ಹಣದಿಂದ ಪತ್ನಿಯೊಂದಿಗೆ ವಿದೇಶಗಳಿಗೆ ಭೇಟಿ ನೀಡುತ್ತಿದ್ದ ಕೇರಳದ ವಿಜಯನ್‌ ಮೃತ್ಯು

Update: 2021-11-19 10:35 GMT
Photo: Newindianexpress

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಕಾಫಿಹೌಸ್ ನಡೆಸುತ್ತಿದ್ದ ಹಾಗೂ ತಮ್ಮ ಉಳಿತಾಯದ ಹಣದಿಂದ ಪತ್ನಿಯೊಡನೆ ವಿಶ್ವಪರ್ಯಟನೆ ನಡೆಸುತ್ತಾ ಸುದ್ದಿಯಾಗಿದ್ದ ಕೆ.ಆರ್ ವಿಜಯನ್ (71) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಹಾಗೂ ಈ ಮೂಲಕ ತಮ್ಮ ಪತ್ನಿಯೊಂದಿಗಿನ ತಮ್ಮ ಪಯಣವನ್ನು ಕೊನೆಗೊಳಿಸಿದ್ದಾರೆ. ಪ್ರತಿ ಬಾರಿ ವಿದೇಶ ಪ್ರಯಾಣ ಕೈಗೊಳ್ಳುತ್ತಿದ್ದಾಗಲೂ ತಪ್ಪದೇ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಿದ್ದ ವಿಜಯನ್ ಪತ್ನಿಯನ್ನು ಒಬ್ಬಂಟಿಯಾಗಿಸಿ ತಮ್ಮ ಇಹಲೋಕದ ಪಯಣ ಮುಗಿಸಿದ್ದಾರೆ.

ಕೊಚ್ಚಿಯ ಗಾಂಧಿ ನಗರದಲ್ಲಿ ಶ್ರೀ ಬಾಲಾಜಿ ಕಾಫಿ ಹೌಸ್ ನಡೆಸುತ್ತಿದ್ದ ವಿಜಯನ್  ಹಾಗೂ ಮೋಹನ ಇತ್ತೀಚೆಗಷ್ಟೇ ರಷ್ಯಾ ಪ್ರಯಾಣ ಮುಗಿಸಿ ಬಂದಿದ್ದರು. ವಾಪಸಾದ ಕೆಲವೇ ದಿನಗಳಲ್ಲಿ ವಿಜಯನ್ ಮೃತರಾಗಿದ್ದಾರೆ.

ತಮ್ಮ ಕಾಫಿ ಹೌಸ್‍ನಲ್ಲಿನ ವ್ಯಾಪಾರದಿಂದ ಉಳಿಸಿದ ಹಣದಿಂದಲೇ ದಂಪತಿ ವಿಶ್ವಪರ್ಯಟನೆ ನಡೆಸುತ್ತಿದ್ದರು. ಪ್ರತಿ ದಿನ ದೊರೆತ ಲಾಭದ ಹಣದಿಂದ ಅವರು ರೂ. 300 ಉಳಿಸುತ್ತಿದ್ದರು. ಹೀಗೆ ಇಲ್ಲಿಯ ತನಕ  ಕಳೆದ 16 ವರ್ಷಗಳಿಂದ ದಂಪತಿ 26 ದೇಶಗಳಿಗೆ ಭೇಟಿ ನೀಡಿದ್ದಾರೆ.

ವಿಜಯನ್ ಅವರಿಗೆ ಚಿಕ್ಕಂದಿನಿಂದಲೂ ಪ್ರಯಾಣವೆಂದರೆ ಅಚ್ಚುಮೆಚ್ಚು. ದಂಪತಿ ಮೊದಲ ಬಾರಿ 2007ರಲ್ಲಿ ಇಸ್ರೇಲ್‍ಗೆ ಪ್ರಯಾಣ ಬೆಳೆಸಿದ್ದರು. ಆರಂಭದಲ್ಲಿ ಬ್ಯಾಂಕ್ ಸಾಲ ಪಡೆದು ವಿದೇಶ ಪ್ರಯಾಣ ಕೈಗೊಳ್ಳುತ್ತಿದ್ದ ದಂಪತಿ ನಂತರ ಅದನ್ನು ವಾಪಸ್ ನೀಡಿದ್ದರು. ದಂಪತಿಯ ಬಗ್ಗೆ ತಿಳಿದು ಮುಂದೆ ಹಲವಾರು ಸಂಸ್ಥೆಗಳು ಅವರ ಪ್ರಯಾಣವನ್ನು ಪ್ರಾಯೋಜಿಸಿದ್ದರಿಂದ ಅವರು ತಮ್ಮ ಕೈಯ್ಯಿಂದ ಹಣ ಖರ್ಚು ಮಾಡುವುದು ಅಗತ್ಯವಿರಲಿಲ್ಲ. ಅವರ ಕೊನೆಯ ರಷ್ಯಾ ಪ್ರಯಾಣ ವೆಚ್ಚವನ್ನು ಟ್ರಾವೆಲ್ ಏಜನ್ಸಿಯೊಂದು ಭರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News