ಎಂಐಟಿ ವಿದ್ಯಾರ್ಥಿ ತಂಡದ ಅಟಲ್ ಸುರಂಗ ಅಧ್ಯಯನ ಪ್ರವಾಸ

Update: 2021-11-19 13:37 GMT

ಮಣಿಪಾಲ, ನ.19:ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ದೇಶದ ಪ್ರತಿಷ್ಠಿತ 100 ಇಂಜಿನಿಯರಿಂಗ್ ಕಾಲೇಜುಗಳ ಪ್ರತಿಭಾನ್ವಿತ ತಲಾ 10 ವಿದ್ಯಾರ್ಥಿಗಳಂತೆ, ಒಟ್ಟು 1000 ವಿದ್ಯಾರ್ಥಿಗಳಿಗೆ ಅಟಲ್ ಸುರಂಗ ಅಧ್ಯಯನ ಪ್ರವಾಸವನ್ನು ಈ ವರ್ಷ ಪ್ರಾಯೋಜಿಸಿದ್ದು, ಇದರಲ್ಲಿ ಮಣಿಪಾಲ ಎಂಐಟಿಯ ಸಿವಿಲ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 10 ವಿದ್ಯಾರ್ಥಿಗಳು ಅಟಲ್ ಸುರಂಗಕ್ಕೆ ಭೇಟಿಕೊಟ್ಟರು.

ಈ ಅಧ್ಯಯನ ಪ್ರವಾಸದ ಮುಖ್ಯ ಉದ್ದೇಶ, ಅಟಲ್ ಸುರಂಗ ನಿರ್ಮಾಣ ಹಂತದಲ್ಲಿ ಎದುರಾದ ಭೂವೈಜ್ಞಾನಿಕ, ಭೂತಾಂತ್ರಿಕ ಸವಾಲುಗಳು ಹಾಗೂ ನೈಸರ್ಗಿಕ ವಿಪತ್ತುಗಳ ನಿರ್ವಹಣೆ, ಸುರಂಗ ಕೊರೆಯಲು ಉಪಯೋಗಿಸಲಾದ ಆಸ್ಟ್ರಿಯಾದ ವಿಶೇಷ ತಂತ್ರಜ್ಞಾನದ ಅಧ್ಯಯನ, ವಿದ್ಯಾರ್ಥಿಗಳಲ್ಲಿ ಸಂಶೋದನೆ, ಆವಿಷ್ಕಾರ ಮನೆಭಾವವನ್ನು ಬೆಳೆಸುವುದಾಗಿತ್ತು.

ಅಟಲ್ ಸುರಂಗವು 2020ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದ್ದು, ಹಿಮಾಚಲಪ್ರದೇಶದ ಮನಾಲಿ ಹಾಗೂ ಲಡಾಕಿನ ಲೇಹ್ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಸುರಂಗ ನಿರ್ಮಾಣದ ತರುವಾಯ ಸುಮಾರು 3-4 ಗಂಟೆಗಳಷ್ಟು ಕಡಿಮೆ ಅವಧಿಯಲ್ಲಿ ಈ ಪಟ್ಟಣಗಳನ್ನು ತಲುಪಬಹುದಾಗಿದೆ. ಇದು ವಿಶ್ವದ 3000ಮೀ.ಗಿಂತಲೂ ಎತ್ತರದಲ್ಲಿರುವ ಅತೀ ಉದ್ದದ (9.02ಕಿ.ಮೀ.) ರಸ್ತೆ ಸುರಂಗವಾಗಿದೆ.

ಈ ತಂಡದ ನೇತೃತ್ವವನ್ನು ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಭೂಗರ್ಭಶಾಸ್ತ್ರ ಪ್ರಾದ್ಯಾಪಕ ಡಾ.ಕೆ.ಬಾಲಕೃಷ್ಣ ವಹಿಸಿದ್ದರು. ತಂಡದಲ್ಲಿ ವಿದ್ಯಾರ್ಥಿಗಳಾದ ರೂಪಾಲಿ ಶಾಂತಾ ಪೈ, ರಿತು ಮರಿಯ, ಉಪಾಸನಾ ಸೂರ್ಯ ಕಿರಣ್, ಆಶ್ರಯಿ ರಂಜನ್, ದಿವ್ಯಾಂಶ್ ಶುಕ್ಲಾ, ಆತ್ಮಜ್ಯೋತಿ, ರೆಹನ್ ಅಗರ್ವಾಲ್, ಸೌಮಿಕ್ ರಾಯ್, ಅನಿರುದ್ಧ ತೆಲಂಗ್ ಹಾಗೂ ಫೆನಿಲ್ ಬಿರಾವತ್ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News