"ಫೇಸ್ ಬುಕ್ ಗೆ ಭಾರತದ 20 ಭಾಷೆಗಳಲ್ಲಿ 11ರಲ್ಲಿ ಮಾತ್ರ ಸತ್ಯ ಶೋಧಕರಿದ್ದಾರೆ": ಸಮಿತಿಗೆ ಮಾಹಿತಿ ನೀಡಿದ ಅಧಿಕಾರಿ

Update: 2021-11-19 14:31 GMT

ಹೊಸದಿಲ್ಲಿ, ನ. 19: ಫೇಸ್‌ಬುಕ್ ಇಂಡಿಯಾದಲ್ಲಿ ಲಭ್ಯವಿರುವ 20 ಭಾಷೆಗಳ ಪೈಕಿ ಕೇವಲ 11 ಭಾಷೆಗಳಲ್ಲಿ ಮಾತ್ರ ನಕಲಿ ಸುದ್ದಿಗಳ ಬಗ್ಗೆ ನಿಗಾ ವಹಿಸುವ 10 ಸತ್ಯ ಶೋಧಕರೊಂದಿಗೆ ತಾನು ಪಾಲುದಾರಿಕೆ ಹೊಂದಿರುವುದಾಗಿ ಫೇಸ್‌ಬುಕ್ ನ ಸಾರ್ವಜನಿಕ ನೀತಿ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರು ದಿಲ್ಲಿ ವಿಧಾನ ಸಭೆಯ ಶಾಂತಿ ಹಾಗೂ ಸಾಮರಸ್ಯ ಸಮಿತಿಗೆ ಗುರುವಾರ ಮಾಹಿತಿ ನೀಡಿದ್ದಾರೆ. 

ಹೊಸದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಕುರಿತು ದಿಲ್ಲಿ ವಿಧಾನ ಸಭೆಯ ಸಮಿತಿ ತನಿಖೆ ನಡೆಸುತ್ತಿದೆ. ‘‘ನಮಗೆ ಭಾರತದಾದ್ಯಂತ 10 ಸತ್ಯ ಶೋಧಕರು ಪಾಲುದಾರರು ಇದ್ದಾರೆ’’ ಎಂದು ತುಕ್ರಾಲ್ ಸಮಿತಿಗೆ ತಿಳಿಸಿದ್ದಾರೆ. ಭಾರತಕ್ಕಾಗಿ ಸಮಂಜಸವಾದ ಸತ್ಯ ಶೋಧಕ ಮೂಲ ಸೌಕರ್ಯ ನಿಮ್ಮಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ತುಕ್ರಾಲ್, ‘‘ನಾವು ಅದನ್ನು ಹೊಂದಿಲ್ಲ. ನಾವು ಸತ್ಯದ ತೀರ್ಪುಗಾರರಲ್ಲ. ಆದರೆ, ನಾವು ಭಾರತದಲ್ಲಿ 10 ಸತ್ಯ ಶೋಧಕ ಪಾಲುದಾರರನ್ನು ಹೊಂದಿದ್ದೇವೆ. ಎಲ್ಲರೂ ಇಂಟರ್ ನ್ಯಾಷನಲ್ ಪ್ಯಾಕ್ಟ್ ಚೆಕ್ಕಿಂಗ್ ನೆಟ್ವರ್ಕ್ ನಿಂದ ಪ್ರಮಾಣಿತರಾಗಿದ್ದಾರೆ’’ ಎಂದಿದ್ದಾರೆ.

 ಫೇಸ್‌ಬುಕ್ ಭಾರತದಲ್ಲಿ ಪ್ರಸ್ತುತ 20 ಭಾಷೆಗಳಲ್ಲಿ ಸೇವೆ ನೀಡುತ್ತಿದೆ ಎಂದು ತುಕ್ರಾಲ್ ಸಮಿತಿಗೆ ಮಾಹಿತಿ ನೀಡಿದರು. ದಿಲ್ಲಿಯಲ್ಲಿ ಹಿಂಸಾಚಾರ ನಡೆಯುವ ಸಂದರ್ಭ 2020 ಫೆಬ್ರವರಿಯಲ್ಲಿ ಎಷ್ಟು ಮಂದಿ ಸತ್ಯ ಶೋಧಕರು ಪಾಲುದಾರರಾಗಿದ್ದರು ಎಂದು ಸಮಿತಿ ಅವರಲ್ಲಿ ಪ್ರಶ್ನಿಸಿತು. ಸುಮಾರು 8ರಿಂದ 10 ಮಂದಿ ಪಾಲುದಾರರು ಇರಬಹುದು ಎಂದು ಎಂದು ತುಕ್ರಾಲ್ ಅಂದಾಜಿಸಿದರು. 2020 ಜನವರಿ 1ರಿಂದ 2020 ಎಪ್ರಿಲ್ 1ರ ವರೆಗೆ ಈ ಪಾಲುದಾರರು ಕೈಗೊಂಡ ಸತ್ಯ ಶೋಧಕ ಕಾರ್ಯಾಚರಣೆಯ ಪಟ್ಟಿ ಒದಗಿಸಲು ಸಾಧ್ಯವೇ ಎಂದು ಸಮಿತಿಯ ಅಧ್ಯಕ್ಷ ರಾಘವ ಚಂದ್ರ ಕೇಳಿದರು.

ಫೇಸ್‌ಬುಕ್‌ನ ಸುರಕ್ಷಾ ತಂಡಕ್ಕೆ ಸಾಕಷ್ಟು ಸಂಪನ್ಮೂಲದ ಕೊರತೆ ಇದೆ ಎಂದು ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಹಾಗೂ ವಿಸಲ್ ಬ್ಲೋವರ್ (ಸತ್ಯ ಬಯಲಿಗೆಳೆಯುವವರು) ಫ್ರಾನ್ಸಿಸ್ ಹ್ಯುಜೆನ್ ಆರೋಪಿಸಿದ್ದಾರೆ. ಸುರಕ್ಷೆಗಾಗಿ ಲಾಭದ ಒಂದಂಶವನ್ನು ಕೂಡ ಕಳೆದುಕೊಳ್ಳಲುಕೂಡ ಫೇಸ್‌ಬುಕ್‌ ಇಷ್ಟಪಡುವುದಿಲ್ಲ ಎಂದು ಅವರು ಅಮೆರಿಕ ಸಂಸತ್ತಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News