ಪಂಜಾಬ್‌ನಲ್ಲಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವ ಕುರಿತ ಪ್ರಶ್ನೆಗೆ ಅಕಾಲಿ ದಳ ಉತ್ತರವೇನು ಗೊತ್ತಾ?

Update: 2021-11-19 18:01 GMT

ಚಂಡಿಗಡ: ಸುಮಾರು 15 ತಿಂಗಳು ಕಾಲ ನಡೆದ ರೈತರ ಪ್ರತಿಭಟನೆಯ ಬಳಿಕ ಕೇಂದ್ರ ಸರಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದ ಬಳಿಕ ಬಿಜೆಪಿಯನ್ನು ತೊರೆದಿರುವ ಮಿತ್ರ ಪಕ್ಷಗಳು ಮತ್ತೆ ಒಂದಾಗಬಹುದು ಎನ್ನಲಾಗಿದೆ. ಆದರೆ ಕಳೆದ ವರ್ಷ ಕೃಷಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ನಂಟನ್ನು ಕಡಿದುಕೊಂಡಿದ್ದ ಶಿರೋಮಣಿ ಅಕಾಲಿ ದಳ ಪಂಜಾಬ್‌ನಲ್ಲಿ ಬಿಜೆಪಿಯೊಂದಿಗೆ ಮತ್ತೊಮ್ಮೆ ಕೈಜೋಡಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.

ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರುವತ್ತ ಚಿತ್ತಹರಿಸಿರುವ ಅಕಾಲಿದಳ, ಕಪ್ಪು ಕಾಯ್ದೆಗಳ ಕುರಿತು ಪ್ರಧಾನಿಗೆ ನಾನು ಮೊದಲೇ ಎಚ್ಚರಿಕೆ ನೀಡಿದ್ದೆ ಎಂದು ಅಕಾಲಿ ದಳದ ಮುಖ್ಯಸ್ಥ ಸುಖ್‌ಬೀರ್  ಸಿಂಗ್ ಬಾದಲ್ ಹೇಳಿದ್ದಾರೆ.

"ನಾವು ಏನು ಹೇಳಿದ್ದೇವೆವೋ ಅದು ನಿಜವಾಗಿದೆ'' ಎಂದ ಬಾದಲ್ ಅವರಲ್ಲಿ ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂದು ಕೇಳಿದಾಗ "ಅದು ಸಾಧ್ಯವಿಲ್ಲ" ಎಂದರು.

ಇದಕ್ಕೂ ಮೊದಲು ಅಕಾಲಿ ದಳ ಪಕ್ಷದ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಮೋದಿ ಅವರ ಮಹತ್ವದ ಘೋಷಣೆಯ ಬಳಿಕ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು.

"ನಾನು ಪಂಜಾಬ್, ದೇಶ ಹಾಗೂ ವಿದೇಶ ರೈತರನ್ನು ಅಭಿನಂದಿಸುವಾಗ ನನ್ನ ಮೊದಲ ಯೋಚನೆ ಉದಾತ್ತ ಹೋರಾಟದಲ್ಲಿ ಪ್ರಾಣಬಿಟ್ಟ 700 ರೈತರ ಕುಟುಂಬದತ್ತ ಹೋಗುತ್ತದೆ. ಇದು ಹಾಗೂ ಲಖಿಂಪುರ ಖೇರಿಯಂತಹ ಅವಮಾನಕರ ಘಟನೆಗಳು ಈ ಸರಕಾರದ ಮುಖದ ಮೇಲೆ ಯಾವತ್ತೂ ಕಪ್ಪು ಚುಕ್ಕೆಯಾಗಿ ಉಳಿಯುತ್ತವೆ'' ಎಂದು ಬಾದಲ್ ಹೇಳಿದರು.

ಇದಕ್ಕೂ ಮೊದಲು ಮಾಡಿದ್ದ ಟ್ವೀಟ್‌ನಲ್ಲಿ ಕೇಂದ್ರದ ಮಾಜಿ ಸಚಿವೆ ಹರ್‌ಸಿಮ್ರಾತ್ ಕೌರ್ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಕಾನೂನುಬದ್ಧ ಹಕ್ಕು ಮಾಡಲು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News